ಬರಿಮಾರು ಪಂ ಕಚೇರಿಯಲ್ಲೇ ಅಧ್ಯಕ್ಷನ ಚಕ್ಕಂದ

ರಾಸಲೀಲೆ ಕೆಸರಿನಲ್ಲಿ ಬಿಜೆಪಿ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಅಧ್ಯಕ್ಷ ಗುಮಾಸ್ತೆಯೊಡನೆ ಕಚೇರಿಯೊಳಗೇ ಚಕ್ಕಂದ ಹೊಡೆಯುತ್ತಾ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಸ್ವತಃ ಪಂ ಸದಸ್ಯರೇ ತಿರುಗಿಬಿದ್ದ ಘಟನೆ ಬರಿಮಾರು ಗ್ರಾ ಪಂ.ನಲ್ಲಿ ನಡೆದಿದೆ. ಅಧ್ಯಕ್ಷ ಮತ್ತು ಗುಮಾಸ್ತೆಯ ಅನೈತಿಕ ನಡೆಯಿಂದ ಮುಜುಗರಕ್ಕೊಳಗಾದ ಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಗುಮಾಸ್ತೆಯನ್ನು ಸೇವೆಯಿಂದ ವಜಾ ಮಾಡಲಾಗಿದ್ದು, ಸದಸ್ಯರೊಬ್ಬರಲ್ಲಿ ಇವರಿಬ್ಬರ ವಿಡಿಯೋ ಇದೆ ಎಂದು ತಿಳಿದುಬಂದಿದೆ.

ಎಂಟು ಜನ ಸದಸ್ಯ ಬಲದ ಬರಿಮಾರು ಗ್ರಾಮ ಪಂ.ನಲ್ಲಿ ಎಲ್ಲರೂ ಬಿಜೆಪಿ ಬೆಂಬಲಿತರಾಗಿರುವ ಕಾರಣ ವಿರೋಧ ಪಕ್ಷ ಎಂಬುದು ಇಲ್ಲವಾಗಿದೆ. ವಸಂತ ಪೂಜಾರಿ ಅಧ್ಯಕ್ಷರಾಗಿರುವ ಬರಿಮಾರು ಪಂ.ಗೆ ಕೆಲ ತಿಂಗಳ ಹಿಂದಷ್ಟೆ ಭೂಮಿಕಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ತಾತ್ಕಾಲಿಕ ನೆಲೆಯಲ್ಲಿ ಗುಮಾಸ್ತೆಯಾಗಿ ನೇಮಿಸಲಾಗಿತ್ತು. ಅಧ್ಯಕ್ಷರ ಮುತುವರ್ಜಿಯಿಂದ ಯಾವಾಗ ಭೂಮಿಕಾ ಗುಮಾಸ್ತೆಯಾದಳೋ ಕೆಲದಿನಗಳಲ್ಲೇ ಬರಿಮಾರು ಪಂ ಎಂಬುದು ಇವರಿಬ್ಬರ ಖಾಸಗಿ ಕೋಣೆಯಾಗಿತ್ತೆಂದು ಪಂ ಸದಸ್ಯರು ಹೇಳುತ್ತಿದ್ದಾರೆ. ಪಂ.ನಲ್ಲಿ ನಡೆಯುತ್ತಿದ್ದ ಇವರಿಬ್ಬರ ದರ್ಬಾರಿನಿಂದಾಗಿ ಇತರ ಸದಸ್ಯರು ಮತ್ತು ಸಿಬ್ಬಂದಿ ಹೈರಾಣರಾಗಿದ್ದರೆನ್ನಲಾಗಿದೆ.

ಗುಮಾಸ್ತೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಪಂ ಅಧ್ಯಕ್ಷ ತಾನೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ವರ್ತಿಸುತ್ತಿದ್ದರೆನ್ನಲಾಗಿದೆ. ಸರಕಾರಿ ಅನುದಾನಗಳು, ಯೋಜನೆಗಳೆಲ್ಲವೂ ಗುಮಾಸ್ತೆ ಹೇಳಿದ ವ್ಯಕ್ತಿಗೆ ಮೀಸಲಿಡುತ್ತಿದ್ದ ಅಧ್ಯಕ್ಷರ ಕಾರ್ಯವೈಖರಿ ಇತರ ಸದಸ್ಯರಿಗೆ ಸಂಕಷ್ಟ ತಂದೊಡ್ಡಿತ್ತು. ಮಹಿಳಾ ಸದಸ್ಯರು ಅದೆಷ್ಟೋ ಬಾರಿ ಗುಮಾಸ್ತೆಗೆ ತಮ್ಮ ಮಗಳಂತೆ ಬುದ್ಧಿ ಹೇಳಿದ್ದಲ್ಲದೇ ಅಧ್ಯಕ್ಷಗೂ ಮನವರಿಕೆ ಮಾಡಿದ್ದರೆನ್ನಲಾಗಿದೆ. ಆದರೆ ಅದ್ಯಾವುದನ್ನೂ ಕೇಳಿಸಕೊಳ್ಳದ ಅಧ್ಯಕ್ಷ ಮತ್ತು ಗುಮಾಸ್ತೆ ಸಂಜೆಯಾದ ಬಳಿಕ ಪಂ ಕಚೇರಿಯನ್ನು ಅನೈತಿಕ ಅಡ್ಡೆಯನ್ನಾಗಿ ಬದಲಾಯಿಸಿದ್ದಾರೆಂದು ಸದಸ್ಯರು ಆರೋಪಿಸಿದ್ದಾರೆ.

ಇವರಿಬ್ಬರ ಅನೈತಿಕ ನಡೆಯಿಂದ ಮುಜುಗರಕ್ಕೊಳಗಾದ ಸದಸ್ಯರು 16/12/2106ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ರಾದ್ದಾಂತ ಎಬ್ಬಿಸಿದ್ದಾರೆ. ಅಲ್ಲದೇ ತಕ್ಷಣವೇ ಗುಮಾಸ್ತೆಯನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ಗುಮಾಸ್ತೆಗೆ ಇನ್ನೊಂದು ಬಾರಿ ಅವಕಾಶ ಕೊಡುವಂತೆ ಸ್ವತಃ ಪಂ. ಅಧ್ಯಕ್ಷ ಹೇಳಿದರೂ ಸದಸ್ಯರ ಒತ್ತಾಯ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪಿಡಿಒ ಖಡಕ್ ನಿರ್ಧಾರ ಕೈಗೊಂಡಿದ್ದರು. ಪಂ ರಾಜ್ ಅಧಿನಿಯಮ 1993ರ ಪ್ರಕರಣ 113ರ ಉಪಪ್ರಕರಣ 3ರ ಅನ್ವಯ ಗುಮಾಸ್ತೆಯನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಿದ್ದರು. ಆದರೆ ಸದಸ್ಯರೊಬ್ಬರು ಈಗಾಗಲೇ ಪಂ ಕಚೇರಿಯಲ್ಲಿ ನಡೆಯುತ್ತಿದ್ದ ಅಧ್ಯಕ್ಷ ಮತ್ತು ಗುಮಾಸ್ತೆಯ ರಾಸಲೀಲೆಯ ವಿಡಿಯೋ ತನ್ನಲ್ಲಿರುವ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದು, ಅದು ಯಾವಾಗ ಸ್ಫೋಟಗೊಳ್ಳುವುದೋ ಎಂಬುದು ಜನರ ಕುತೂಹಲವಾಗಿದೆ.

ಈ ಬಗ್ಗೆ ಹೇಳಿಕೆ ಪಡೆಯಲು ಪಂ ಅಧ್ಯಕ್ಷರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಯತ್ನ ಫಲಪ್ರದವಾಗಲಿಲ್ಲ.