ಖಾಲಿ ಪೇಪರಿಗೆ ಕುಡುಕರ ಸಹಿ ಸಂಗ್ರಹ : ಆರೋಪ

ಸಾಂದರ್ಭಿಕ ಚಿತ್ರ

ಸರ್ಕಾರಿ ಶಾಲೆ ಪಕ್ಕದ ಬಾರ್ ಉಳಿಸಲು ಮಾಲಕನ ಹರಸಾಹಸ

ಪಡುಬಿದ್ರಿ : “ಸರ್ಕಾರಿ ಶಾಲಾ-ಕಾಲೇಜು ಪಕ್ಕದಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳ ಕರ್ತವ್ಯಲೋಪದಿಂದ ನಿರ್ಮಾಣಗೊಂಡಿರುವ ಬಾರನ್ನು ಗ್ರಾಮಸ್ಥರ ಹೋರಾಟದ ನಡುವೆಯೂ ಉಳಿಸಲು ಯತ್ನಿಸುತ್ತಿರುವ ಬಾರ್ ಮಾಲಿಕ ಅಂತಿಮವಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಮದ್ಯ ಸೇವನೆಗೆ ಬಾರಿಗೆ ಬರುವ ಗ್ರಾಹಕರಲ್ಲಿ ಒತ್ತಾಯ ಪೂರ್ವಕ ಸಹಿ ಸಂಗ್ರಹ ಮಾಡುತ್ತಿದ್ದಾರೆ” ಎಂಬುದಾಗಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಆರೋಪಿಸಿದ್ದಾರೆ.

“ಕೆಲ ದಿನಗಳ ಹಿಂದೆ ನಡೆದ ಪಡುಬಿದ್ರಿ ಗ್ರಾಮಸಭೆಯಲ್ಲಿ ಇಡೀ ಗ್ರಾಮದ ಜನರೇ ಬಾರ್ ತೆರವುಗೊಳಿಸುವಂತೆ ಆಗ್ರಹಿಸಿದ್ದು, ಜನರ ಒತ್ತಡಕ್ಕೆ ಮಣಿದ ಗ್ರಾ ಪಂ ಅಂತಿಮವಾಗಿ ಬಾರಿಗೆ ನೀಡಿದ ನಿರಾಕ್ಷೇಪಣಾ ಪತ್ರವನ್ನು ರದ್ದುಗೊಳಿಸಿತ್ತು. ಇದೇ ಸಂದರ್ಭ ಸ್ಥಳಕ್ಕೆ ಬಂದ ಶಾಸಕ ವಿನಯಕುಮಾರ್ ಸೊರಕೆ ಕೂಡಾ ನ್ಯಾಯ ದೊರಕಿಸಿಕೊಡುವ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಜನಪರ ಕಾಳಜಿ ಇಲ್ಲದ ಬಾರ್ ಮಾಲಿಕ ವೈ ಸುಧೀರಕುಮಾರ್ ತನ್ನ ಬಾರಿಗೆ ಬಂದ ಗ್ರಾಹಕರು ಕುಡಿದು ಮರಳುವ ಸಂದರ್ಭ ಅವರಿಂದ ಒತ್ತಾಯ ಪೂರ್ವಕವಾಗಿ ಸಹಿ ಸಂಗ್ರಹ ನಡೆಸಿರುವುದು ಖಂಡನೀಯ, ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ” ಎಂದು ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ತಿಳಿಸಿದ್ದಾರೆ.