ವ್ಯಕ್ತಿಗೆ ವೈಟರ್, ಬಾರ್ ಮಾಲಕನಿಂದ ಹಲ್ಲೆ

ಗಂಭೀರ ಪೆಟ್ಟು ಬಿದ್ದಿರುವುದು

ದೂರು ದಾಖಲಿಸದ ಪೊಲೀಸ್ ವಿರುದ್ಧ ಉಡುಪಿ ಎಸ್ಪಿಗೆ ದೂರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕೂಲಿ ಕಾರ್ಮಿಕರೊಬ್ಬರು ಕೆಲಸ ಮುಗಿಸಿ ತನ್ನ ಜೊತೆಗಾರರೊಂದಿಗೆ ಬಾರೊಂದಕ್ಕೆ ತೆರಳಿದ್ದ ಸಂದರ್ಭ ತಡವಾಯಿತೆಂದು ಆಕ್ಷೇಪಿಸಿ ಅರ್ಧಕ್ಕೆ ಎದ್ದು ಹೋಗುವಂತೆ ಬೆದರಿಸಿ ಹಲ್ಲೆ ನಡೆಸಿದ ಘಟನೆ ಹೆಮ್ಮಾಡಿಯ ಬಾರೊಂದರಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ತಲ್ಲೂರು ನಿವಾಸಿ ಲ್ಯಾನ್ಸಿ ಡಿಸೋಜಾ(51) ಎಂದು ಗುರುತಿಸಲಾಗಿದೆ.

ಲ್ಯಾನ್ಸಿ ಡಿಸೋಜಾ ಕೂಲಿ ಕೆಲಸ ಮಾಡಿಕೊಂಡಿದ್ದು, ಜನವರಿ 5ರಂದು ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ತಡವಾಯಿತೆಂದು ಬಾರಿಗೆ ಊಟ ಮಾಡಲೆಂದು ತನ್ನ ಸ್ನೇಹಿತರೊಂದಿಗೆ ಹೆಮ್ಮಾಡಿ ಜ್ಯುವೆಲ್ ಪಾರ್ಕ್ ಬಾರಿಗೆ ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ಇದ್ದಕ್ಕಿದ್ದಂತೆ ವೈಟರ್ ಬಂದು ತಕ್ಷಣ ಏಳುವಂತೆ ಸೂಚಿಸಿದ್ದು, ಇದಕ್ಕೆ ಒಪ್ಪದಿದ್ದಾಗ ಬಾರ್ ಮಾಲಕ ಬಂದು ಕಬ್ಬಿಣದ ರಾಡಿನಲ್ಲಿ ಲ್ಯಾನ್ಸಿ ಡಿಸೋಜಾರ ತಲೆಗೆ ಹೊಡೆದಿದ್ದಾರೆ ಎಂಬುದಾಗಿ ಗಂಭೀರ ಹಲ್ಲೆಗೊಳಗಾದ ಲ್ಯಾನ್ಸಿ ಡಿಸೋಜಾ ಆರೋಪಿಸಿದ್ದಾರೆ.

ಗಾಯಗೊಂಡ ಲ್ಯಾನ್ಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಮಾಹಿತಿ ಪಡೆದ ಕುಂದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೇಳಿಕೆ ಪಡೆದುಕೊಂಡಿದ್ದರೂ ಎಫ್ ಐ ಆರ್ ದಾಖಲಿಸಿಲ್ಲ ಎಂದೂ ಆರೋಪಿಸಿದ್ದಾರೆ. ಆದರೆ ಆರೋಪಿತ ಬಾರ್ ಮಾಲಕ ಅಶೋಕ್ ಶೆಟ್ಟಿ ಗಂಗೊಳ್ಳಿ ಠಾಣೆಯಲ್ಲಿ ದರೋಡೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಸುಳ್ಳು ದೂರು ನೀಡಿದ್ದು, ಎಫ್ ಐ ಆರ್ ಹಾಕಲಾಗಿದೆ ಎಂದು ಗಾಯಗೊಂಡ ಲ್ಯಾನ್ಸಿ ಡಿಸೋಜಾ ಆರೋಪಿಸಿದ್ದಾರೆ. ಇದೇ ಸಂದರ್ಭ ಕುಂದಾಪುರ ಪೊಲೀಸರು ಬಾರ್ ಮಾಲಕರ ಆಮಿಷಕ್ಕೆ ಬಲಿಯಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾಗಿ ಉಡುಪಿ ಎಸ್ಪಿಯವರಿಗೆ ದೂರು ನೀಡಿದ್ದಾರೆ.