ಬಾರ್ ಮಾಲಿಕ, ಸಿಬ್ಬಂದಿಗೆ ತಲವಾರು ಹಲ್ಲೆ

ರೆಸ್ಟೋರೆಂಟಲ್ಲಿ ರೌಡಿ ದಾಂದಲೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕುಡಿದ ಬಿಲ್ಲನ್ನು ನೀಡದೇ ನಗರದ ರೌಡಿ ಸಹಿತ ಮೂವರ ತಂಡವೊಂದು ತಲವಾರ್ ದಾಳಿ ನಡೆಸಿದ ಪರಿಣಾಮ ಬಾರ್ ಮಾಲಿಕ ಮತ್ತು ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಲ್ಲದೇ, ಬಾರಿನ ಗಾಜನ್ನು ಒಡೆದು ದಾಂದಲೆ ನಡೆಸಿದ ಘಟನೆ ಉಡುಪಿ ನಗರದ ಕೋರ್ಟ್ ಎದುರಿರುವ ಪಂಚರತ್ನಾ ಪ್ಯಾರಾಡೈಸ್ ಬಾರ್ & ರೆಸ್ಟೋರೆಂಟಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಬಾರ್ ಮಾಲಿಕ ನಗರದ ಹೊರವಲಯದ ಕೊಡವೂರು ಕಂಬಳಕಟ್ಟೆ ನಿವಾಸಿ ಸಂತೋಷ್ ಶೆಟ್ಟಿ ನಗರದ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಬಾರ್ ಸಿಬ್ಬಂದಿ ಮಂಜುನಾಥ ಉಡುಪಿ ಜಿಲ್ಲಾ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿ ನಗರದ ಕೃಷ್ಣ ಮಠ ಸಮೀಪದ ಬೈಲಕೆರೆ ನಿವಾಸಿ ಕಮ್

ರೌಡಿಶೀಟರ್ ಕಿರಣ್ ಶೇರಿಗಾರ್ (31), ಆತನ ಸಹಚರ ಅನ್ವರ್ ಹಾಗೂ ಇನ್ನೊಬ್ಬ ತಲವಾರು ದಾಳಿ ನಡೆಸಿದ ಆರೋಪಿಗಳು. ಕಿರಣ್ ಶೇರಿಗಾರ್ ಮತ್ತು ಆತನ ಸಹಚರ ಅನ್ವರನನ್ನು ಉಡುಪಿ ನಗರ ಠಾಣಾ ಪೊಲೀಸರು ಘಟನಾ ಸ್ಥಳದಲ್ಲಿ ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಎರಡು ತಲವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಿರಣ್ ಆತನ ಸಹಚರ ಅನ್ವರ್ ಎಂಬವರು ಮಂಗಳವಾರ ರಾತ್ರಿ 8 ಗಂಟೆ ಹೊತ್ತಿಗೆ ಕುಡಿದು ಬಿಲ್ಲನ್ನು ನೀಡಿಲ್ಲ. ಈ ಸಂದರ್ಭ ಬಿಲ್ಲನ್ನು ಕೊಟ್ಟು ಹೋಗಿ ಎಂದು ಮಾಲಿಕ  ಸಂತೋಷ್ ಅನ್ವರನನ್ನು ಬಾರಿನೊಳಗೆ ಕೂರಿಸಿದ್ದು, ಆ ವೇಳೆ ಕಿರಣ್ ಬಿಲ್ಲು ನೀಡುತ್ತೇನೆಂದು ಬಾರಿನಿಂದ ಹೊರಹೋಗಿದ್ದಾನೆ. ರಾತ್ರಿ ಸುಮಾರು 11.30 ಹೊತ್ತಿಗೆ ಬೈಕಿನಲ್ಲಿ ಕಿರಣ್ ಮತ್ತು ಇನ್ನೊಬ್ಬ ತಲವಾರು ಹಿಡಿದುಕೊಂಡು ಬೈಕಿನಲ್ಲಿ ಬಂದಿದ್ದು, ಸಂತೋಷ್ ಶೆಟ್ಟಿಯನ್ನು ಹೊರಗೆ ಕರೆದಿದ್ದಾರೆ. ಸಂತೋಷ್ ಶೆಟ್ಟಿ ಹೊರಬರದಿದ್ದಾಗ ಕಿರಣ್ ಮತ್ತು ಇನ್ನೊಬ್ಬ ಆಫೀಸಿನ ಗಾಜನ್ನು ಒಡೆದು ಸಂತೋಷ್ ಶೆಟ್ಟಿಗೆ ತಲವಾರು ದಾಳಿ ನಡೆಸಿದಾಗ ಹೋಟೆಲ್ ಸಿಬ್ಬಂದಿ ಬಂದಿದ್ದು, ಈ ಸಂದರ್ಭದಲ್ಲಿ ಕಿರಣ್ ಮತ್ತು ಹೋಟೆಲ್ ಸಿಬ್ಬಂದಿ ಮಧ್ಯೆ ಹೊಡೆದಾಟ ನಡೆದಿದೆ.

ಈ ಬಗ್ಗೆ ಬಾರ್ ಮಾಲಿಕ ಸಂತೋಷ್ ಶೆಟ್ಟಿ ನೀಡಿದ ದೂರಿನಂತೆ ಆರೋಪಿಗಳಾದ ಕಿರಣ್ ಶೇರಿಗಾರ್, ಆತನ ಸಹಚರ ಅನ್ವರ್ ಹಾಗೂ ಇನ್ನೊಬ್ಬ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರು ಕೂಡ ದಾಖಲಾಗಿದೆ. ಕಿರಣ್ ತನ್ನ ಸ್ನೇಹಿತ ಅನ್ವರನೊಂದಿಗೆ ಬಾರಿನಲ್ಲಿ ಕುಡಿದು ಹೊರಬರುತ್ತಿದ್ದ ವೇಳೆ ಬಾರ್ ಮಾಲಿಕ ಸಂತೋಷ್ ಶೆಟ್ಟಿ, ಸುಜಿತ್ ಹಾಗೂ ಬಾರ್ ಸಿಬ್ಬಂದಿ ರಾಡ್ ಮತ್ತು ಮರದ ತುಂಡಿನಿಂದ ಹಲ್ಲೆ ನಡೆಸಿ, ಅಡುಗೆ ಕೋಣೆಯಲ್ಲಿದ್ದ ಚೂರಿಯಿಂದ ಇರಿದು ಕೊಲೆಗೆ ಯತ್ನಿದ್ದಲ್ಲದೇ, ಕಿರಣ್ ಬಳಿಯಿದ್ದ ಬಂಗಾರದ ಚೈನ್, ಉಂಗುರ, 20 ಸಾವಿರ ರೂಪಾಯಿ ನಗದು ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ದೂರಲಾಗಿದೆ.