ಅಪಾಯ ಆಹ್ವಾನಿಸುತ್ತಿರುವ ಆಲದ ಮರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬೃಹತಾಕಾರದ ಆಲದ ಮರವೊಂದು ಸಂಪೂರ್ಣ ಒಣಗಿ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದರೂ ಸ್ಥಳೀಯರು ಈ ಬಗ್ಗೆ ಹಲವು ಬಾರಿ ಅಧಿಕೃತರ ಗಮನಕ್ಕೆ ತಂದರೂ ಯಾರೂ ಇತ್ತ ಗಮನ ಹರಿಸಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಉಪ್ಪಳ ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ತಾಲೂಕು ಕಚೇರಿಯ ಪರಿಸರದಲ್ಲಿ ಸಾರ್ವಜನಿಕರು ನಡೆದಾಡುತ್ತಿರುವ ಹಾಗೂ ವಾಹನಗಳು ನಿಲುಗಡೆಯಾಗುತ್ತಿರುವ ಸ್ಥಳದಲ್ಲಿ ಅಪಾಯ ಆಹ್ವಾನಿಸುವ ರೀತಿಯಲ್ಲಿ ಈ ಆಲದ ಮರ ಇದೆ.

ಸುಮಾರು ನಾಲ್ಕು ತಿಂಗಳ ಹಿಂದೆ ಈ ಮರದ ರೆಂಬೆಯೊಂದು ಮುರಿದು ಅದರ ಅಡಿ ಭಾಗದಲ್ಲಿ ನಿಂತಿದ್ದ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣವಾಗಿ ಹಾನಿಗೊಂಡಿತ್ತು. ಆ ಕಾರಿನಲ್ಲಿ ಅದೃಷ್ಟವಶಾತ್ ಯಾರೂ ಇಲ್ಲದೇ ಇದ್ದುದರಿಂದ ದುರಂತ ತಪ್ಪಿ ಹೋಗಿತ್ತು. ಈಗಲೂ ರಾಷ್ಟ್ರೀಯ ಹೆದಾರಿಯಲ್ಲಿ ಖಾಸಗಿ ವಾಹನದಲ್ಲಿ ಆಗಮಿಸುವ ಯಾತ್ರಿಕರು ಇದೇ ಮರದಡಿ ವಿಶ್ರಾಂತಿಗಾಗಿ ವಾಹನ ನಿಲ್ಲಿಸುವುದು ಕಂಡು ಬರುತ್ತಿದೆ. ಆದರೆ ಈ ಮರವನ್ನು ತೆರವುಗೊಳಿಸದೇ ಇದ್ದರೆ ದುರಂತ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಮಂಗಲ್ಪಾಡಿ ಪಂ ಅಧಿಕೃತರಿಗೆ ಈ ಬಗ್ಗೆ ದೂರು ನೀಡಲಾಗಿದ್ದರೂ “ಅದು ನಮಗೆ ಸಂಬಂಧಪಟ್ಟದ್ದಲ್ಲ, ಅರಣ್ಯ ಇಲಾಖೆ ಅಥವಾ ರಾಷ್ಟ್ರೀಯ ಹೆದ್ದಾರಿ ಅಧಿಕೃತರನ್ನು ಸಂಪರ್ಕಿಸಿ” ಎಂದು ಹೇಳಿ ಅವರು ತಪ್ಪಿಸಿಕೊಂಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.