ಬಂಟ್ವಾಳದ 108 ಅಂಬುಲೆನ್ಸ್ ಊಟಕ್ಕಿಲ್ಲದ ಉಪ್ಪಿನಕಾಯಿ

ಸಾಂದರ್ಭಿಕ ಚಿತ್ರ

ಬಂಟ್ವಾಳ : ಸ್ಟಾಫ್ ನರ್ಸ್ ಲಭ್ಯರಿಲ್ಲ ಎಂಬ ಕುಂಟು ನೆಪವೊಡ್ಡಿ ಬಂಟ್ವಾಳದ 108 ಅಂಬ್ಯುಲೆನ್ಸ್ ಚಾಲಕ ತುರ್ತು ಕರೆಗೆ ಸ್ಪಂದಿಸಲು ನಿರಾಕರಿಸಿದ್ದಲ್ಲದೆ ಉಡಾಫೆ ವರ್ತಿಸಿದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

ಬಂಟ್ವಾಳ ನಿವಾಸಿ ರಿಯಾಝ್ ಎಂಬವರು ತನ್ನ ತುಂಬು ಗರ್ಭಿಣಿ ಪತ್ನಿಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾನುವಾರ ತಡ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ  108 ರಕ್ಷಾ ಕವಚ ಅಂಬ್ಯುಲೆನ್ಸಿಗೆ ಕರೆ ಮಾಡಿದ್ದಾರೆ. ಈ ಸಂದರ್ಭ ಕರೆ ಸ್ವೀಕರಿಸಿದ ಬಂಟ್ವಾಳ ಅಂಬ್ಯಲೆನ್ಸ್ ಚಾಲಕ ಸ್ಟಾಫ್ ನರ್ಸ್ ಇಲ್ಲದ ಕಾರಣ ಬರಲಾಗುತ್ತಿಲ್ಲ. ಫರಂಗಿಪೇಟೆ ಅಂಬ್ಯುಲೆನ್ಸ್ ಚಾಲಕಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಫರಂಗಿಪೇಟೆ ಅಂಬ್ಯುಲೆನ್ಸಗೆ ಕರೆ ಮಾಡುವಷ್ಟು ಸಮಯಾವಕಾಶ ಇಲ್ಲದ ಪರಿಣಾಮ ದಾರಿ ಕಾಣದ ರಿಯಾಝ್ ಕೊನೆಗೆ ಸ್ಥಳೀಯ ನಿವಾಸಿ ರಶೀದ್ ಎಂಬವರಿಗೆ ಕರೆ ಮಾಡಿ ಅವರ ಕಾರಿನಲ್ಲಿ ಗರ್ಭಿಣಿಯನ್ನು ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಿದ್ದಾರೆ.

ಸಾರ್ವಜನಿಕರ ತುರ್ತು ಸೇವೆಗಾಗಿ ಸರಕಾರ ಸ್ಟಾಫ್ ನರ್ಸ್ ಸಹಿತ ಆರೋಗ್ಯ ರಕ್ಷಾ ಕವಚ ಅಂಬ್ಯುಲೆನ್ಸ್ ಸೇವೆಯನ್ನು ನೀಡಿದೆಯಾದರೂ ಚಾಲಕರ ಬೇಜವಾಬ್ದಾರಿ ವರ್ತನೆಯಿಂದ ಸಾರ್ವಜನಿಕ ಸೇವೆಗೆ ಅಂಬ್ಯುಲೆನ್ಸ್ ದೊರೆಯದೆ ಇರುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದೆ.