ಕೊನೆಗೂ ಬಂಟ್ವಾಳ ಪುರಸಭೆ ಸ್ಥಾಯಿ ಸಮಿತಿ ಅಸ್ತಿತ್ವಕ್ಕೆ ಬಂತು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆಗೇರಿ ಬರೋಬ್ಬರಿ ಮೂರೂವರೆ ವರ್ಷ ಕಳೆದರೂ ಸಂಪೂರ್ಣ ನೆನೆಗುದಿಗೆ ಬಿದ್ದಿದ್ದ ಸ್ಥಾಯಿ ಸಮಿತಿ ಕೊನೆಗೂ ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ.

ಸ್ಥಾತಿ ಸಮಿತಿಗೆ ಮೂರ್ನಾಲ್ಕು ಮಂದಿ ಪುರಸಭಾ ಸದಸ್ಯರು ಆಕಾಂಕ್ಷೆ ವ್ಯಕ್ತಪಡಿಸಿದ್ದರೂ ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಬಿ ವಾಸು ಪೂಜಾರಿ ಅವರಿಗೆ ಮಣೆ ಹಾಕಿದ ಪರಿಣಾಮ ವಾಸು ಪೂಜಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇತರ ಸದಸ್ಯರಾಗಿ ಆಡಳಿತರೂಢ ಕಾಂಗ್ರೆಸ್ಸಿನಿಂದ ಜಗದೀಶ್ ಕುಂದರ್, ಚಂಚಲಾಕ್ಷಿ, ಪ್ರಭಾ ಆರ್ ಸಾಲಿಯಾನ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯ ಬಿ ಮೋಹನ್ ಹಾಗೂ ಎಸ್ಡಿಪಿಐ ಸದಸ್ಯ ಮೂನಿಶ್ ಅಲಿ ಅವರನ್ನು ಆರಿಸಲಾಯಿತು.

ಮಂಗಳವಾರ ಪುರಸಭೆಯ ಸಾಮಾನ್ಯ ಸಭೆಗೂ ಅರ್ಧ ತಾಸು ಮುನ್ನ ನಡೆದ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಬಿಜೆಪಿ ಗೈರು ಸ್ಥಾಯಿ ಸಮಿತಿ ರಚನಾ ಸಭೆಗೆ ವಿರೋಧ ಪಕ್ಷ ಬಿಜೆಪಿ ಸದಸ್ಯರು ಸಂಪೂರ್ಣ ಗೈರಾಗಿದ್ದು, ಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತರಾತುರಿಯಲ್ಲಿ ವಿಶೇಷ ಸಭೆ ಕರೆದು ಸ್ಥಾಯಿ ಸಮಿತಿ ರಚಿಸಿದ್ದು, ನಿಯಮ ಬಾಹಿರವಾಗಿದ್ದು, ಇದಕ್ಕೆ ತಮ್ಮ ಸಹಮತ ಇಲ್ಲ ಎಂದು ಸಾರಿದರು.