ಪಾಣೆಮಂಗಳೂರು ಬಳಿ ತೆರೆದ ಬಾವಿಗೆ ರಕ್ಷಣಾ ಕವಚ ಅಳವಡಿಸುವಲ್ಲಿ ಬಂಟ್ವಾಳ ಪುರಸಭೆ ವಿಫಲ

ಅಪಾಯಕ್ಕೆ ಆಹ್ವಾನ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇತ್ತೀಚೆಗೆ ಮತ್ತೆ ಬೆಳಗಾವಿಯಲ್ಲಿ ಕಾವೇರಿ ಎಂಬ ಬಾಲಕಿ ತೆರೆದ ಕೊಳವೆಬಾವಿಗೆ ಬಿದ್ದು ಮೃತಪಟ್ಟ ನಂತರ ಇನ್ನೊಮ್ಮೆ ಎಚ್ಚೆತ್ತುಕೊಂಡು ಸರಕಾರ ತಕ್ಷಣ ತೆರೆದ ಬಾವಿ ಹಾಗೂ ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚಲು ಆದೇಶ ಹೊರಡಿಸಿದೆಯಾದರೂ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ತೆರೆದ ಬಾವಿಗೆ ರಕ್ಷಣಾ ಕವಚ ಅಳವಡಿಸಲು ಬಂಟ್ವಾಳ ಪುರಸಭೆ ನಿರ್ಣಯ ಕೈಗೊಂಡು ವರ್ಷ ಕಳೆದರೂ ಇನ್ನೂ ಯಾವುದೇ ರಕ್ಷಣಾ ಕಾರ್ಯ ನಡೆಸದ ಪ್ರಕರಣ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ 2 ಕಡೆ ತೆರೆದ ಬಾವಿಗಳು ಸಾರ್ವಜನಿಕರ ಪಾಲಿಗೆ ಮೃತ್ಯುಕೂಪವಾಗಿ ಅಪಾಯವನ್ನು ಆಹ್ವಾನಿಸುತ್ತಿದ್ದರೂ ಪುರಸಭಾಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಣೆಮಂಗಳೂರು ಸಮೀಪದ ಆಲಡ್ಕ ಮಿಲಿಟ್ರಿ ಕ್ಯಾಪಿಂಗ್ ಗ್ರೌಂಡಿನ ಆಟದ ಮೈದಾನದಲ್ಲಿ ಬಾವಿಯೊಂದು ಕಳೆದ ಹಲವು ಸಮಯಗಳಿಂದ ಬಾಯಿ ತೆರೆದ ಸ್ಥಿತಿಯಲ್ಲಿದ್ದು, ಇಲ್ಲಿನ ನಿತ್ಯ ಆಟವಾಡುವ ವಿದ್ಯಾರ್ಥಿಗಳ ಪಾಲಿಗೆ ಸದಾ ಅಪಾಯವನ್ನು ಆಹ್ವಾನಿಸುತ್ತಲೇ ಇದೆ. ಈ ಮೈದಾನದಲ್ಲಿ ಬೇಸಿಗೆ ಸಮಯದಲ್ಲಿ ನಿರಂತರವಾಗಿ ಕ್ರಿಕೆಟ್ ಸಹಿತ ವಿವಿಧ ಕ್ರೀಡಾಕೂಟಗಳನ್ನು ಸ್ಥಳೀಯ ಯುವಕರು ಆಯೋಜಿಸುತ್ತಿದ್ದು, ಈ ಸಂದರ್ಭದಲ್ಲಂತೂ ಕ್ರೀಡಾಳುಗಳು ಕ್ರೀಡಾಸ್ಪೂರ್ತಿಯಲ್ಲಿ ಮೈಮರೆತು ಓಡಾಟ ನಡೆಸುವ ವೇಳೆ ತೆರೆದ ಬಾವಿ ಇರುವುದನ್ನು ಮರೆತು ನೇರವಾಗಿ ಬಾವಿಗೆ ಬೀಳುವ ಅಪಾಯಕರ ಸನ್ನಿವೇಶ ಕಂಡುಬರುತ್ತಿದೆ.

ಇತ್ತೀಚೆಗೆ ಈ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವೊಂದರ ವೇಳೆ ಕ್ರಿಕೆಟ್ ತಂಡದ ಆಟಗಾರನೊಬ್ಬ ಕ್ಷೇತ್ರರಕ್ಷಣೆಯಲ್ಲಿ ತೊಡಗಿಸಿಕೊಂಡ ಸಂದರ್ಭ ಚೆಂಡು ಬೌಂಡರಿ ಗೆರೆ ದಾಟುವುದನ್ನು ತಡೆಯುವ ಭರದಲ್ಲಿ ನೇರವಾಗಿ ಬಾವಿಯೊಳಗೆ ಬಿದ್ದಿದ್ದಾನೆ. ಆದರೆ ಅದೃಷ್ಟವಶಾತ್ ಆತನಿಗೆ ಈಜು ಬರುತ್ತಿದ್ದುದರಿಂದ ಜೀವಾಪಾಯದಿಂದ ಪಾರಾಗಿದ್ದಾನೆ. ಆದರೆ ಕೈ-ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಇಂತಹ ಹಲವು ಪ್ರಕರಣಗಳು ಪ್ರತಿವರ್ಷವೂ ನಡೆಯುತ್ತಲೇ ಇದೆ.