ಅನುಮತಿ ಪತ್ರ ಪಡೆಯದ ಕನ್ನಡ ಭವನ ಬಗ್ಗೆ ಬಂಟ್ವಾಳ ಪುರಸಭೆಯಲ್ಲಿ ಚರ್ಚೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಕೈಕುಂಜೆಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನ ಪುರಸಭೆಯಿಂದ ನಿರಪೇಕ್ಷಣಾ ಪತ್ರ ಪಡೆಯದೆ ನಿರ್ಮಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಎ ಗೋವಿಂದ ಪ್ರಭು ಆರೋಪಿಸಿದರು.

ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕನ್ನಡ ಭವನಕ್ಕೆ ಪುರಸಭೆಯಿಂದ ಅನುದಾನ ನೀಡುವ ಬಗ್ಗೆ ಚರ್ಚೆಗೆ ಬಂದ ವೇಳೆ ಗರಂ ಆದ ಗೋವಿಂದ ಪ್ರಭು ಆರು ತಿಂಗಳ ಹಿಂದೆಯಷ್ಟೆ ಕನ್ನಡ ಭವನಕ್ಕೆ ತರಾತುರಿಯಲ್ಲಿ ತಹಶೀಲ್ದಾರರು ದಾಖಲೆ ಪತ್ರ ತಯಾರಿಸಿ ಕೊಟ್ಟಿದ್ದಾರೆ. ಈ ಸಂಬಂಧ ನನ್ನಲ್ಲಿ ಪೂರ್ತಿ ಮಾಹಿತಿ ಇದೆ. ಪಾರ್ಕಿಂಗ್ ಮತ್ತಿತರ ಉದ್ದೇಶಕ್ಕೆ ಈ ಹಿಂದೆ ಸರಕಾರದಿಂದ 54 ಸೆಂಟ್ಸ್ ಸ್ಥಳವನ್ನು ಪುರಸಭೆ ಖರೀದಿಸಿತ್ತು. ಆ ಜಾಗ ಎಲ್ಲಿ ಹೋಗಿದೆ ? ಮಾರ್ಕೆಟಿಗೆಂದು ಎಪಿಎಂಸಿಗೆ ನೀಡಿದ ಜಾಗವನ್ನು ಅತಿಕ್ರಮಿಸಲಾಗಿದೆ. ಜಿಲ್ಲಾಧಿಕಾರಿ ಪಾರ್ಕಿಂಗ್ ಸೂಕ್ತ ಸ್ಥಳ ಎಂದು ಸೂಚಿಸಿದ ಜಾಗವನ್ನು ಇಲ್ಲಿನ ಎಲೆಕ್ಟ್ರಾನಿಕ್ಸ್ ಮಳಿಗೆ ಸಹಿತ ಖಾಸಗಿಯವರು ಅತಿಕ್ರಮಣ ಮಾಡಿದ್ದಾರೆ. ಇಲ್ಲಿ ರಾಜಕೀಯ ಒತ್ತಡ ತಂದು ರಸ್ತೆ ಬದಿಯಲ್ಲಿ ಟ್ರಾನ್ಸಫಾರ್ಮರ್ ಅಳವಡಿಸಲಾಗಿದೆ. ಒಟ್ಟಾರೆ ಕೈಕುಂಜ ರಸ್ತೆಯೇ ಮೂಲ ನಕ್ಷೆಯಂತಿಲ್ಲ. ಇದಕ್ಕಾಗಿಯೇ ಈ ಹಿಂದೆ ಲೋಕಾಯಕ್ತಕ್ಕೆ ದೂರು ನೀಡಿದ್ದೇನೆ ಎಂದ ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯ ಆನ್ಲೈನ್ ಕೊಠಡಿಯೊಳಗೆ ಬ್ರೋಕರುಗಳು ಹಾಗೂ ಕೆಲ ತಾ ಪಂ ಸದಸ್ಯರು ರಾಜಾರೋಷವಾಗಿ ನುಗ್ಗಿ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕುವಂತೆ ಪುರಸಭಾ ಸದಸ್ಯರು ಆಗ್ರಹಿಸಿದರು.

ಪುರಸಭಾ ಸದಸ್ಯರೇ ಆ ಕೊಠಡಿಗೆ ಹೋಗುತ್ತಿಲ್ಲ. ಹೀಗಿದ್ದರೂ ಬ್ರೋಕರುಗಳು, ಕೆಲ ತಾ ಪಂ ಸದಸ್ಯರು ನೇರವಾಗಿ ಕೊಠಡಿಗೆ ನುಗ್ಗುತ್ತಾರೆಂದರೆ ಕೇಳುವವರು ಇಲ್ಲವೆ ? ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಅಲ್ಲಿ ಮಹಿಳಾ ಸಿಬ್ಬಂದಿಯೇ ಇರುತ್ತಾರೆ. ಬ್ರೋಕರುಗಳು ಅಲ್ಲಿ ಕುಳಿತು ಖಾತೆ ಬದಲಾಯಿಸುವ, ಅರ್ಜಿ ತುಂಬಿಸುವ ಕೆಲಸ ಮಾಡಿದರೆ ಯಾರ ಖಾತೆ, ಯಾರಿಗೋ ಆದರೆ ಯಾರು ಹೊಣೆ ? ಈ ವಿಚಾರ ಈಗಾಗಲೇ ಗಮನಕ್ಕೆ ತಂದರೂ ಕ್ರಮಕೈಗೊಳ್ಳದ ಮುಖ್ಯಾಧಿಕಾರಿಯನ್ನು ಅವರು ತೀವ್ರ ತರಾಟೆಗೆಳೆದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರಾದ ಜಗದೀಶ್ ಕುಂದರ್, ಗಂಗಾಧರ, ಶರೀಫ್ ಶಾಂತಿಅಂಗಡಿ ಸಹಿತ ಹಲವರು ಧ್ವನಿಗೂಡಿಸಿದರು.

ಈ ಸಂದರ್ಭ ಪ್ರತಿಕ್ರಯಿಸಿದ ಅಧ್ಯಕ್ಷ ಪಿ ರಾಮಕೃಷ್ಣ ಆಳ್ವ ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಆ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ ಎಂಬ ಫಲಕ ಹಾಕುವಂತೆ ಸೂಚಿಸಿದರು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಸಭೆಗೆ ತಿಳಿಸಿ ಚರ್ಚೆಗೆ ತೆರೆ ಎಳೆದರು.