ಸಿದ್ದರಾಮಯ್ಯರನ್ನು ಸ್ವಾಗತಿಸಲು ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸಿ ವಿವಿಧ ಆಭಿವೃದ್ದಿ ಕಾಮಗಾರಿಗಳನ್ನು ಜನತೆಗೆ ಸಮರ್ಪಿಸಲಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಹಿತ ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಗಳನ್ನು ಸ್ವಾಗತಿಸುವ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಬಿ ಸಿ ರೋಡು, ಬಂಟ್ವಾಳ ನಗರದೆಲ್ಲಡೆ ಮುಖ್ಯಮಂತ್ರಿ ಸಹಿತ ಇತರ ನಾಯಕರಿಗೆ ಶುಭ ಕೋರುವ ಬ್ಯಾನರ್, ನಗರದಲ್ಲೆಡೆ ವಿದ್ಯುದ್ದೀಪಗಳನ್ನು ಅಳವಡಿಸಿ ಶೃಂಗರಿಸಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವುದರಿಂದ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಮುಖ್ಯಮಂತ್ರಿ ಆಗಮನಕ್ಕೆ ಇನ್ನಷ್ಟು ಕಳೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಿಲ್ಲದ ಹುರುಪು ಕಂಡು ಬರುತ್ತಿದೆ. ಈ ಹಿಂದೆ ಬಂಟ್ವಾಳದಲ್ಲಿ ಇದ್ದ ಗುಂಪುಗಾರಿಕೆಗಳನ್ನು ಮರೆತು ಒಂದಾಗಿರುವ ಕೈ ಪಾಳಯದ ನಾಯಕರು ತಮ್ಮದೇ ಆದ ಶೈಲಿಯಲ್ಲಿ ಕಾರ್ಯಪ್ರವೃತ್ತರಾಗಿದ್ದು, ಮುಖ್ಯಮಂತ್ರಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದ್ದಾರೆ.

ಬಂಟ್ವಾಳದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಅಕ್ಷರಶಃ ವಿಧಾನಸಭಾ ಚುನಾವಣೆಗೆ ಅಧಿಕೃತ ಪ್ರಚಾರ ಕಾರ್ಯದ ಆರಂಭದಂತೆ ಕಂಡುಬರುತ್ತಿದ್ದು, ಕಾಂಗ್ರೆಸಿಗರು ಕಾರ್ಯಕ್ರಮದ ಯಶಸ್ವಿ ನಿಟ್ಟಿನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.