ಗಾಂಜಾ ಸಾಗಾಟ ಆರೋಪದಲ್ಲಿ ಬಂಟ್ವಾಳ ಯುವಕ ಕತಾರ್ ಜೈಲಿಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಗಾಂಜಾ ಸಾಗಾಟ ಆರೋಪದಲ್ಲಿ ಬಂಟ್ವಾಳದ ಯುವಕನೊಬ್ಬ ಕತಾರ್ ಪೊಲೀಸರಿಂದ ಬಂಧಿಸಲ್ಟಟ್ಟು ಜೈಲು ವಾಸ ಅನುಭವಿಸುತ್ತಿರುವ ಘಟನೆ ವರದಿಯಾಗಿದೆ.

ಕತಾರ್ ಜೈಲು ಪಾಲಾದ ಬಶೀರ್
ಕತಾರ್ ಜೈಲು ಪಾಲಾದ ಬಶೀರ್

ತಾಲೂಕಿನ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ-ನೆಹರುನಗರ ನಿವಾಸಿ ಹನಸಬ್ಬ-ಆಸಿಯಮ್ಮ ದಂಪತಿಯ ಪುತ್ರ ಬಶೀರ್ (32) ಎಂದು ಹೆಸರಿಸಲಾಗಿದೆ. ಈ ಹಿಂದೆ ಕೇರಳ ರಾಜ್ಯದ  ಕಾಂಞಂಗಾಡ್ ಎಂಬಲ್ಲಿ ಹಣ್ಣು-ಹಂಪಲು ಅಂಗಡಿಯಲ್ಲಿ ದುಡಿಯುತ್ತಿದ್ದ ಈತ ಕಳೆದ ಒಂದು ತಿಂಗಳ ಹಿಂದೆ ಸ್ನೇಹಿತನೊಬ್ಬನ ಮುಖಾಂತರ ಕತಾರ್ ದೇಶದ ಉದ್ಯೋಗ ವೀಸಾ ಪಡೆದು ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ಕತಾರಿಗೆ ಪ್ರಯಾಣ ಬೆಳೆಸಿದ್ದ. ಕತಾರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಬಶೀರನ ಬ್ಯಾಗನ್ನು ವಿಮಾನ ನಿಲ್ದಾಣ ಅಧಿಕಾರಿಗಳು ಪರಿಶೀಲಿಸುವ ವೇಳೆ ಬ್ಯಾಗಿನೊಳಗೆ ಅಮಲು ಪದಾರ್ಥದ ಕಟ್ಟೊಂದು ಪತ್ತೆಯಾಗಿದೆ ಎನ್ನಲಾಗಿದೆ. ಇದನ್ನು ಸ್ವತಃ ಬಶೀರನೇ ಸಾಗಾಟ ನಡೆಸಿದ್ದಾನೋ ಅಥವಾ ಇನ್ಯಾರೋ ನೀಡಿದ ಪಾರ್ಸೆಲ್ ರವಾನಿಸುವ ಭರದಿಂದ ಉಂಟಾದ ಪ್ರಮಾದದಿಂದಾಗಿ ಈ ಅವಾಂತರಕ್ಕೆ ಸಿಲುಕಿ ಜೈಲು ಪಾಲಾಗುವಂತಾಗಿದೆಯೇ ಎಂಬುದು ಖಚಿತಪಟ್ಟಿಲ್ಲ.

ಕತಾರ್ ದೇಶದ ಕಾನೂನಿನಂತೆ ಬಶೀರನನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅಮಲು ಪದಾರ್ಥ ಸಾಗಾಟ ಆರೋಪದಡಿ ಪ್ರಕರಣ ದಾಖಲಿಸಿ ಈತನನ್ನು ಜೈಲಿಗಟ್ಟಲಾಗಿದೆ. ಕಳೆದೊಂದು ತಿಂಗಳಿನಿಂದ ಬಶೀರ್ ಇದೀಗ ಕತಾರ್ ಜೈಲಿನಲ್ಲಿರುವುದಾಗಿ ತಿಳಿದು ಬಂದಿದೆ. ಅಮಲು ಪದಾರ್ಥ ಬಶೀರ್ ಸಾಗಾಟ ನಡೆಸಿಲ್ಲ. ಕತಾರ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿದ್ದು, ಆತನೇ ಅಮಲು ಪದಾರ್ಥದ ಕಟ್ಟನ್ನು ಈತನ ಬ್ಯಾಗಿನೊಳಗೆ ಹಾಕಿ ಪರಾರಿಯಾಗಿದ್ದಾನೆ ಎಂಬುದು ಬಶೀರ್ ಕುಟುಂಬಿಕರ ಆರೋಪ. ಆದರೆ ಬ್ಯಾಗ್ ಭದ್ರಪಡಿಸಿಕೊಂಡ ಬಳಿಕ ಇನ್ನೊಬ್ಬರು ಬ್ಯಾಗಿನೊಳಗೆ ಕಟ್ಟು ತುರುಕಿಸಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬಂದ ಕತಾರ್ ಪೊಲೀಸರು ಈತನನ್ನು ಗಂಭೀರ ಪ್ರಕರಣದಡಿ ಬಂಧಿಸಿ ಜೈಲಿಗಟ್ಟಿದ್ದಾರೆ ಎನ್ನಲಾಗಿದೆ.