ವಿವಾದಿತ ಬಸ್ ತಂಗುದಾಣದ ತನಿಖೆ ನಡೆಸಿದ ಬಂಟ್ವಾಳ ಇಒ

ಬಸ್ ತಂಗುದಾಣ ಸ್ಥಳದಲ್ಲಿ ತನಿಖೆ ನಡೆಸಿದ ತಂಡ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಲೋಕಾಯುಕ್ತರು ನೀಡಿದ ಆದೇಶದನ್ವಯ ಬಂಟ್ವಾಳ ತಾ ಪಂ ಇಒರವರು ಕೇಪು ಗ್ರಾಮದ ನೀರ್ಕಜೆಯಲ್ಲಿನ ವಿವಾದಿತ ಬಸ್ ತಂಗುದಾಣದ ತನಿಖೆ ನಡೆಸಿದರು.

ಕೇಪು ಗ್ರಾ ಪಂ ಮತ್ತು ಹೆದ್ದಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ನೀರ್ಕಜೆ ರಸ್ತೆ ಬದಿಯಲ್ಲಿ ಸ್ಥಳೀಯ ಕೆಲ ವ್ಯಕ್ತಿಗಳು ಬಸ್ ತಂಗುದಾಣವನ್ನು ನಿರ್ಮಿಸಿದ್ದರು. ತಂಗುದಾಣದ ಹಿಂಬದಿಯ ಜಮೀನಿನ ವಾರೀಸುದಾರೆ ಮರಿಯಮ್ಮ ಎಂಬವರು ಅಕ್ರಮ ತಂಗುದಾಣವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರು. ಕೇಪು ಗ್ರಾ ಪಂ.ಗೆ ಲೋಕೋಪಯೋಗಿ ಇಲಾಖೆಯು ತಂಗುದಾಣವನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಈವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಪಿಡಿಒ ಕರ್ತವ್ಯ ಲೋಪ ಎಸಗಿದ್ದಾರೆಂದು ಆರೋಪಿಸಿದ ಮರಿಯಮ್ಮ ಮತ್ತೆ ಲೋಕಾಯುಕ್ತಕ್ಕೆ ತನ್ನ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತರು ಸ್ಥಳ ತನಿಖೆ ನಡೆಸಿ ವರದಿ ನೀಡುವಂತೆ ಬಂಟ್ವಾಳ ತಾ ಪಂ ಇಒಗೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೀರ್ಕಜೆಗೆ ಇಒ ಸಿಪ್ರಿಯಾನ್ ಮಿರಾಂದ ಅವರು ಪಿಡಿಒ ಮತ್ತು ಪಂ ಅಧ್ಯಕ್ಷರ ಜೊತೆ ಆಗಮಿಸಿ ತನಿಖೆ ನಡೆಸಿದ್ದು, ಆ ಸಂದರ್ಭ ದೂರುದಾರೆ ಮರಿಯಮ್ಮ ಹಾಜರಿದ್ದರು.