ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ಕ್ವಾರಿಯಲ್ಲಿ ಪತ್ತೆಯಾದ ಕಳೇಬರ

ನಮ್ಮ ಪ್ರತಿನಿಧಿ ವರದಿ
ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್ ಬಂದೋಬಸ್ತಿನಲ್ಲಿ ಅಧಿಕಾರಿಗಳು ಮೇಲಕ್ಕೆತ್ತಿ ಪರೀಕ್ಷೆಗಾಗಿ ಶವದ ಅವಶೇಷಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದರು. ಆದರೆ ಮೃತ ವ್ಯಕ್ತಿಯ ಬಗ್ಗೆ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಹಾಗೂ ಯಾವ ರೀತಿಯಲ್ಲಿ ಈ ವ್ಯಕ್ತಿ ಮರಣ ಹೊಂದಿದ್ದಾರೆ ಎಂಬುದೂ ಕೂಡಾ ತನಿಖೆಯ ಬಳಿಕ ಗೊತ್ತಾಗಲಿದೆ.
ಕೊಳ್ನಾಡು ಹಾಗೂ ಇರಾ ಗ್ರಾಮದ ಗಡಿ ಭಾಗವಾಗಿರುವ ಕಡಂತಬೆಟ್ಟು ಗುಡ್ಡಗಾಡು ಪ್ರದೇಶವಾಗಿದ್ದು, ಭಾನುವಾರ ಸಂಜೆ ಸ್ಥಳೀಯ ನಿವಾಸಿಯೊಬ್ಬರು ಆಡು ಮೇಯಿಸಲು ಗುಡ್ಡಕ್ಕೆ ತೆರಳಿದ್ದ ವೇಳೆ ಇಲ್ಲಿನ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿದ್ದ ಶವವನ್ನು ನಾಯಿಗಳು ಎಳೆದಾಡುತ್ತಿರುವುದು ಕಂಡುಬಂದಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಎ ಕೆ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಕತ್ತಲಾದ್ದರಿಂದ ಶವವನ್ನು ಮೇಲಕ್ಕೆತ್ತದೆ ಸೋಮವಾರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಮೇಲೆತ್ತಲಾಗುವುದು ಎಂದು ತೆರಳಿದ್ದರು.
ಸೋಮವಾರ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮತ್ತಿತರರ ಉಪಸ್ಥಿತಿಯಲ್ಲಿ ಶವ ಮೇಲಕ್ಕೆತ್ತಲಾಗಿ ಕಳೇಬರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಮೇಲ್ನೋಟಕ್ಕೆ ಇದು 9 ತಿಂಗಳಿನಿಂದ ವರ್ಷದ ಹಿಂದೆ ಈ ಶವ ಹೂತು ಹಾಕಲಾಗಿದ್ದು, 55-60 ವರ್ಷ ಪ್ರಾಯದ ಗಂಡಸಿನ ಶವ ಇದಾಗಿದೆಯೆಂದು ಶಂಕಿಸಲಾಗಿದೆ ಎಂದಿರುವ ಬಂಟ್ವಾಳ ಗ್ರಾಮಾಂತ ಠಾಣಾಧಿಕಾರಿ ರಕ್ಷಿತ್, ಮುಂದಕ್ಕೆ ವಿಧಿ ವಿಜ್ಞಾನ ಇಲಾಖೆಯ ವರದಿ ಬಂದ ಬಳಿಕ ಮುಂದಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ.