ಅಂಡ್ರಾಯ್ಡ್ ಅಪ್ಲಿಕೇಶನ್ ಆಧರಿತ ಗಾಲಿ ಕುರ್ಚಿ ಅಭಿವೃದ್ಧಿಪಡಿಸಿದ ಬಂಟಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು

ಸಾಂದರ್ಭಿಕ ಚಿತ್ರ

ಉಡುಪಿ : ಶ್ರೀ ಮಧ್ವ ವಾದಿರಾಜ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಂಟಕಲ್ ಇಲ್ಲಿನ ವಿದ್ಯಾರ್ಥಿನಿಯರ ತಂಡವೊಂದು ಅಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಗಾಲಿಕುರ್ಚಿಗಳನ್ನು ನಿಯಂತ್ರಿಸಬಲ್ಲ ಸಾಧನವೊಂದನ್ನು ಅಭಿವೃದ್ಧಿ ಪಡಿಸಿದೆ.

ಆಧುನಿಕ ಯುಗದಲ್ಲಿ ವಿದ್ಯುತ್ ಚಾಲಿತ ಗಾಲಿ ಕುರ್ಚಿಗಳು ನಡೆದಾಡಲು ಕಷ್ಟ ಪಡುವವರಿಗೆ ವರದಾನವಾಗಿದ್ದರೂ ಗಾಲಿ ಕುರ್ಚಿ ದೂರದಲ್ಲಿದ್ದರೆ ಅದನ್ನು ತಲುಪುವುದು ಅವರಿಗೆ ಕಷ್ಟಕರವಾಗಿ ಇತರರ ಸಹಾಯ ಅಗತ್ಯವಾಗಿ ಬಿಡುತ್ತದೆ. ಆದರೆ ಬಂಟಕಲ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಅಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಭಿನ್ನಚೇತನರು ಹಾಗೂ ಇತರ ಅಶಕ್ತ ರೋಗಿಗಳು ತಮ್ಮ ಸ್ಮಾರ್ಟ್ ಫೋನ್ ಮುಖಾಂತರ ತಮಗೆ ಬೇಕಿದ್ದೆಡೆಗೆ ಗಾಲಿ ಕುರ್ಚಿ ತರಿಸಬಹುದಾಗಿದೆ ಹಾಗೂ ಅದರಲ್ಲಿ ಕುಳಿತ ನಂತರವೂ ತಮಗೆ ಎಲ್ಲಿ ಬೇಕೋ ಅಲ್ಲಿಗೆ ಹೋಗಬಹುದಾಗಿದೆ.

ಈ ಅಪ್ಲಿಕೇಶನ್ ಕೆಲಸ ಮಾಡಲು ಬ್ಯಾಟರಿ ಮತ್ತು ಮೋಟಾರ್ ಚಾಲಿತ ಗಾಲಿಕುರ್ಚಿ ಇರಬೇಕಾದರೆ, ಅಂಡ್ರಾಯ್ಡ್ ಅಪ್ಲಿಕೇಶನನ್ನು ಸಂಬಂಧಿತರ ಸ್ಮಾರ್ಟ್ ಫೋನಿನಲ್ಲಿ ಇನ್ಸ್ಟಾಲ್ ಮಾಡಬೇಕು.

ಈ ಸಾಧನವನ್ನು ಸಂಸ್ಥೆಯ ಅಂತಿಮ ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ದೀಕ್ಷಾ ಕಿಣಿ, ಕೆ ಮೇಧಿನಿ, ಲೊವೆಲಿಯಾ ಮೇಬಲ್ ಡಿಸೋಜ, ನಂದಿತಾ ರಾವ್ ಕಿದಿಯೂರ್ ಅವರು ತಮ್ಮ ವಿಭಾಗದ ಸಹಾಯಕ ಪ್ರೊಫೆಸರ್ ಪ್ರಿಯಾಂಕ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ್ದಾರೆ.