ಬಂಟ್ವಾಳದಲ್ಲಿ ಬ್ಯಾನರ್ ನಿಷೇಧವಿದ್ದರೂ ಪುರಸಭಾಧ್ಯಕ್ಷರಿಗೆ ಇದು ಅನ್ವಯಿಸದು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಒಂದೆಡೆ ಬ್ಯಾನರ್ ಅಳವಡಿಕೆಗೆ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಿಂದ ನಿಷೇಧ ವಿಧಿಸಿ ನಾಮಫಲಕದ ಅಳವಡಿಸಿದರೆ, ಇನ್ನೊಂದೆಡೆ ಪುರಸಭಾಧ್ಯಕ್ಷರೇ ಖಾಸಗಿ ಕಾರ್ಯಕ್ರಮವೊಂದಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸಿ ದ್ವಂದ್ವ ನೀತಿ ಅನುಸರಿಸಿದ ಘಟನೆಗೆ ಬಿ ಸಿ ರೋಡು ಪೇಟೆ ಸಾಕ್ಷಿಯಾಗಿದೆ.

ಈಗಾಗಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಪೇಟೆಯ ಹೆದ್ದಾರಿ ಬದಿ ಸಹಿತ ಯಾವುದೇ ಕಡೆ ಬ್ಯಾನರ್, ಬಂಟಿಂಗ್ಸ್ ಅಳವಡಿಸದಿರಲು ಪುರಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಬಳಿಕ ಬಿ ಸಿ ರೋಡಿನ ಎಲ್ಲೆಂದರಲ್ಲಿ ಹಾಕಲಾಗಿದ್ದ ಬ್ಯಾನರ್ಗಳನ್ನು ಪುರಸಭಾಧಿಕಾರಿಗಳು ತೆರವುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬ್ಯಾನರ್ ಅಳವಡಿಕೆ ನಿಷೇಧದ ಬಗ್ಗೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಪುರಸಭಾ ಮುಖ್ಯಾಧಿಕಾರಿಯವರ ಪ್ರಕಟಣೆ ಎಂಬಂತೆ ನಾಮಫಲಕವನ್ನೂ ಕಳೆದ ಕೆಲವು ತಿಂಗಳ ಹಿಂದೆ ಅಳವಡಿಸಲಾಗಿದ್ದು ಕಂಡುಬರುತ್ತಿದೆ. ಈ ಮಧ್ಯೆ ಮೇ 28 ರಂದು ಅಡ್ಯಾರ್ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮವೊಂದಕ್ಕೆ ಸ್ವತಃ ಪುರಸಭಾಧ್ಯಕ್ಷರ ಹೆಸರಿನಲ್ಲಿ ಶುಭ ಕೋರುವ ಬೃಹತ್ ಕಟೌಟ್ ಕಳೆದ ಕೆಲವು ದಿನಗಳಿಂದ ಬಿ ಸಿ ರೋಡು ಪೇಟೆಯಲ್ಲಿ ರಾರಾಜಿಸುತ್ತಿದೆ.

ಬಂಟ್ವಾಳ ಪುರಸಭೆಯ ನಿರ್ಣಯ ಹಾಗೂ ನಿಯಮ ಜನಸಾಮಾನ್ಯರಿಗೆ ಒಂದು ಹಾಗೂ ಜನಸಾಮಾನ್ಯರಿಗೆ ಇನ್ನೊಂದು ಎಂಬ ರೀತಿಯಲ್ಲಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಸಾರ್ವಜನಿಕರು ಪುರಸಭಾಧಿಕಾರಿ ನಾಮಾಂಕಿತದಲ್ಲಿ ಹಾಕಲಾಗಿರುವ ಸೂಚನೆ ಪುರಸಭಾ ಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.