ಪುತ್ತೂರಿನಲ್ಲಿ ಬ್ಲಾಕ್ ಮನಿ ವೈಟ್ ಮಾಡುವ ಪ್ರಕರಣದಲ್ಲಿ ಬ್ಯಾಂಕ್ ಮೆನೇಜರ್ ಕೈವಾಡ

ಪುತ್ತೂರು : ಪುತ್ತೂರಿನಲ್ಲಿ ಬ್ಯಾಕ್ ಆಂಡ್ ವೈಟ್ ಮನಿ ದಂಧೆ ನಡೆಸಿ ಸಿಕ್ಕಿ ಬಿದ್ದ ಮೂವರು ಆರೋಪಿಗಳಿಗೆ ಪುತ್ತೂರಿನ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಸುಮಾರು 18,80000 ನಗದನ್ನು ಸಾಗಾಟ ಮಾಡುವ ವೇಳೆ ಆರೋಪಿಗಳಾದ ಜಾಫರ್ ಶರೀಫ್, ಇಕ್ಬಾಲ್ ಮತ್ತು ನಝೀರ್ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಂಧಿತರಿಂದ 2 ಸಾವಿರ ರೂ ಹೊಸ ನೋಟು 100 ಮತ್ತು 50 ರೂ ಮುಖ ಬೆಲೆಯ ನೋಟುಗಳು ಪತ್ತೆಯಾಗಿತ್ತು.

ಹೊಸ ರೂ 2000 ಸಾವಿರದ ನೋಟು ಆರೋಪಿಗಳಿಗೆ ಎಲ್ಲಿಂದ ಸಿಕ್ಕಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು ಇದರಲ್ಲಿ ಪುತ್ತೂರಿನ ಮೂರು ಪ್ರಮುಖ ಬ್ಯಾಂಕುಗಳ ಸಿಬಂದಿಗಳ ನೇರ ಕೈವಾಡ ಇರುವ ಕುರಿತು ಶಂಕೆ ವ್ಯಕ್ತವಾಗಿದೆ.

ಕಳೆದ ಒಂದು ತಿಂಗಳಿನಿಂದ ಪುತ್ತೂರಿನ ಕೆಲವು ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಅಧಿಕಾರಿಗಳಿಗೆ ಯಾವುದೇ ಹಣ ಪತ್ತೆ ಮಾಡಲು ಸಾದ್ಯವಾಗಿರಲಿಲ್ಲ. ಪುತ್ತೂರಿನ ಚಿನ್ನಾಭರಣ ಮಳಿಗೆಯೊಂದರ ಮಾಲಿಕನಿಗೆ ಸೇರಿದ ಉಮಾರು 3 ಕೋಟಿ ರೂ ಬಲ್ನಾಡು ಎಂಬಲ್ಲಿ ಹಾಲು ಮಾರುವಾತನ ಮನೆಯಲ್ಲಿ ಇಟ್ಟಿರುವ ಕುರಿತು ಶಂಕೆ ವ್ಯಕ್ತವಾಗಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅಲ್ಲಿಯೂ ಯಾವುದೇ ಹಣ ಪತ್ತೆಯಾಗಿರಲಿಲ್ಲ. ಇದೇ ಚಿನ್ನಾಭರಣ ಮಳಿಗೆಯಲ್ಲಿ ತನ್ನ ಕಚೇರಿ ನೌಕರರಿಗೆ ಅಡ್ವಾನ್ಸ್ ಸಂಬಳವನ್ನು ನೀಡಿದ್ದು ಪ್ರತೀ ನೌಕರರಿಗೆ ಹಳೆ ನೋಟನ್ನು ನೀಡಿ ಲಕ್ಷ ರೂಪಾಯಿಗಿಂತಲೂ ಅಧಿಕ ಅಡ್ವಾನ್ಸ್ ಸಂಬಳವನ್ನು ನೀಡಿ ಬ್ಲಾಕ್ ಹಣವನ್ನು ವೈಟ್ ಮಾಡಿದ್ದರು ಎಂಬ ಮಾಹಿತಿಯೂ ಅಧಿಕಾರಿಗಳಿಗೆ ಲಭ್ಯವಾಗಿದೆ.

ಪುತ್ತೂರಿನ ಚಿನ್ನಾಭರಣ ಅಂಗಡಿ ಮಾಲಿಕರ ಬ್ಲಾಕ್ ಹಣವನ್ನೇ ವೈಟ್ ಮಾಡುವ ಉದ್ದೇಶದಿಂದ ಆರೋಪಿಗಳು ಬ್ಯಾಂಕ್ ಮೆನೇಜರ್ ಮೂಲಕ ಕಮಿಷನ್ ದಂಧೆ ನಡೆಸಿದ್ದರು ಎಂಬ ಮಾಹಿತಿ ಆರೋಪಿಗಳಿಂದ ಲಭ್ಯವಾಗಿದೆ. ಪೊಲೀಸರು ಆರೋಪಿಗಳ ಹೇಳಿಕೆಯನ್ನಾಧರಿಸಿ ತನಿಖೆಯನ್ನು ಮುಂದುವರೆಸಿದ್ದು ಹಗಲು ಹೊತ್ತಿನಲ್ಲಿ ಪ್ರಧಾನಿ ಮೋದಿಯವರ ನೋಟು ಬದಲಾವಣೆಯನ್ನು ಬೆಂಬಲಿಸುವ ಉದ್ಯಮಿಗಳು ರಾತ್ರಿ ವೇಳೆ ಕಪ್ಪು ವಹಿವಾಟಿನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.