ನೋಟ್ ಬ್ಯಾನ್ : `ಬ್ಯಾಂಕ್ ನೌಕರರ ಪ್ರತಿಭಟನೆ ನ್ಯಾಯಯುತ’

ಪ್ರಧಾನಿ ನರೇಂದ್ರ ಮೋದಿ ನವಂಬರ್ 8ರಂದು 500 ಮತ್ತು 1000 ರೂ ನೋಟುಗಳನ್ನು ರದ್ದುಪಡಿಸಿ ಅಮಾನ್ಯೀಕರಣಗೊಳಿಸಿದ ಸಂದರ್ಭದಲ್ಲಿ ಐವತ್ತು ದಿನಗಳಲ್ಲಿ ಜನರಿಗೆ ಉಂಟಾಗಬಹುದಾದ ಅನಾನುಕೂಲಗಳು ಕೊನೆಗೊಳ್ಳುತ್ತವೆ ಎಂದು ಹೇಳಿದ್ದರು. ಆದರೆ 50 ದಿನಗಳ ನಂತರ ನಗದುಕೊರತೆ ಇನ್ನೂ ನೀಗಿಲ್ಲ. ದೇಶಾದ್ಯಂತ ಸಾವಿರಾರು ಎಟಿಎಂಗಳು ಹಣವಿಲ್ಲದೆ ಬಣಗುಟ್ಟುತ್ತಿವೆ. ಆರ್ ಬಿ ಐ ವಾರಕ್ಕೆ 24 ಸಾವಿರ ರೂ ಹಣ ಪಡೆಯಲು ಅನುಮತಿ ನೀಡಿದ್ದರೂ ವಿಭಿನ್ನ ಬ್ಯಾಂಕುಗಳು ವಿವಿಧ ಮೊತ್ತ ನಿಗದಿಪಡಿಸಿವೆ. ದೇಶಾದ್ಯಂದ ಅಕ್ರಮ ನಿಧಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಮಾಹಿತಿ ನೀಡದೆ ಇರುವುದರಿಂದ ಬ್ಯಾಂಕ್ ನೌಕರರ ಬಗ್ಗೆ ಸಂಶಯ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಅತಿ ದೊಡ್ಡ ಕಾರ್ಮಿಕ ಸಂಘಟನೆ ಎಐಬಿಇಎ ನಿನ್ನೆ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು ಅಕ್ರಮ ನಗದು ವಿನಿಮಯದ ವಿಚಾರದಲ್ಲಿ ಸಿಬಿಐ ತನಿಖೆಗಾಗಿ ಆಗ್ರಹಿಸಿದೆ. ಈ ಕುರಿತು ಎಐಬಿಇಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಅವರೊಡನೆ ಸಂದರ್ಶನ.


  • ಪ್ರಧಾನಿಗಳ 50 ದಿನಗಳ ಗಡುವು ಮುಗಿದಿದೆ. ಈಗ ಪರಿಸ್ಥಿತಿ ಹೇಗಿದೆ ?

ಯಾವುದೇ ಸುಧಾರಣೆಯಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಲ್ಲಿ ಹಣವೇ ಇಲ್ಲದಾಗಿದೆ. ಅನೇಕ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಕಡಿಮೆ ಹಣ ಪಾವತಿ ಮಾಡಲಾಗುತ್ತಿದೆ.  ಎರಡು ಲಕ್ಷ ಎಟಿಎಂಗಳ ಪೈಕಿ ಶೇ 40ರಷ್ಟರಲ್ಲಿ ಹಣವೇ ದೊರೆಯುತ್ತಿಲ್ಲ. ಈ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳೂ ಕಾಣುತ್ತಿಲ್ಲ. ಹಣ ಪೂರೈಸುವುದು ಆರ್ ಬಿ ಐ ಕರ್ತವ್ಯ. ಇದರಿಂದ ಬ್ಯಾಂಕ್ ನೌಕರರ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು ಜನಸಾಮಾನ್ಯರಲ್ಲಿ ಬ್ಯಾಂಕ್ ನೌಕರರ ಬಗ್ಗೆ ಅನುಮಾನ ಸೃಷ್ಟಿಯಾಗಿದೆ.


  • ಆರ್ ಬಿ ಐ ಮತ್ತು ಸರ್ಕಾರದ ತಪ್ಪಿಗೆ ನೌಕರರು ಏಕೆ ದೋಷಿಗಳಾಗುತ್ತಾರೆ ?

ಆದಾಯ ತೆರಿಗೆ ಇಲಾಖೆಯ ದಾಳಿಗಳಲ್ಲಿ ಸಿಕ್ಕಿರುವ ಕೋಟ್ಯಂತರ ರೂ ಇದಕ್ಕೆ ಕಾರಣ. ಹೊಸ 500 ಮತ್ತು 2000 ರೂ ಮುಖಬೆಲೆಯ ನೋಟುಗಳ ಕೋಟ್ಯಂತರ ರೂ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.  ಇದರಿಂದ ಬ್ಯಾಂಕರುಗಳೇ ಈ ಹಣವನ್ನು ಪೂರೈಸಿದ್ದಾರೆ ಎಂಬ ಗ್ರಹಿಕೆ ಉಂಟಾಗಿದೆ. ಗ್ರಾಹಕರು ಆಕ್ರೋಶದಿಂದಿದ್ದಾರೆ. ವಾಸ್ತವ ಸಂಗತಿ ಎಂದರೆ ಬ್ಯಾಂಕ್ ಶಾಖೆಗಳಲ್ಲಿ ಇಷ್ಟು ಭಾರಿ ಮೊತ್ತದ ಹಣವನ್ನು ವಿನಿಮಯ ಮಾಡಲು ಸಾಧ್ಯವಿಲ್ಲ. ಬಹುಶಃ ಖಾಸಗಿ ಎಟಿಎಂ ನಿರ್ವಹಣಾ ಏಜೆನ್ಸಿಗಳು ಇಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು.


  • ಆರ್ ಬಿ ಐ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್ ನೌಕರರೂ ವಿನಿಮಯ ಮಾಡಿದ್ದಾರಲ್ಲವೇ ?

ಹಾಗೊಮ್ಮೆ ನಡೆದಿದ್ದರೂ ಅದು ಸಾವಿರ ಅಥವಾ ಲಕ್ಷಗಳಲ್ಲಿ ನಡೆದಿರಬಹುದು. ಆದರೆ ಅದಾಯ ತೆರಿಗೆ ದಾಳಿಯಲ್ಲಿ ವಶಪಡಿಸಿಕೊಂಡ ಮೊತ್ತ ಎಷ್ಟು ? ನೂರಾರು ಕೋಟಿ ರೂ. ನಾನು ತಪ್ಪಿತಸ್ಥ ನೌಕರರನ್ನು ಸಮರ್ಥಿಸುತ್ತಿಲ್ಲ. ಆದರೆ ಸಣ್ಣ ಪ್ರಮಾಣದ ನಿಯಮ ಉಲ್ಲಂಘನೆಯನ್ನೇ ವೈಭವೀಕರಿಸುವುದು ಸರಿಯಲ್ಲ. ಸಿಬಿಐ ತನಿಖೆ ನಡೆಯಲಿ. ತಪ್ಪಿತಸ್ಥರ ಅಪರಾಧ ಸಾಬೀತಾದರೆ ಶಿಕ್ಷೆಯಾಗಲಿ..


  • ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯುವುದೇ ?

ಈ ವಾರದಲ್ಲಿ ವೇತನ ಮತ್ತು ಪಿಂಚಣಿ ಪಾವತಿ ಹೆಚ್ಚಾಗಿರುತ್ತದೆ. ಬ್ಯಾಂಕ್ ಶಾಖೆಗಳಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ಇಲ್ಲಿ ಆರ್ ಬಿ ಐ ವೈಫಲ್ಯ ಎದ್ದುಕಾಣುತ್ತದೆ. ಕೆಲವು ಖಾಸಗಿ ಬ್ಯಾಂಕುಗಳಿಗೆ ಹೆಚ್ಚಿನ ಹಣ ನೀಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಆರ್ ಬಿ ಐ ಹಣ ರವಾನಿಸುವ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲೇ ಎಐಬಿಇಎ ಜನವರಿ ಪ್ರತಿಭಟನೆಗೆ ಕರೆ ನೀಡಿತ್ತು. ಪರಿಸ್ಥಿತ ಸುಧಾರಿಸದೆ ಹೋದರೆ ಮುಷ್ಕರ ತೀವ್ರಗೊಳಿಸಲು ಸಿದ್ಧರಾಗಿದ್ದೇವೆ.