ಬ್ಯಾಂಕ್ ಉದ್ಯೋಗದಿಂದ ಕೃಷಿಯತ್ತ ಸಾವಯವ ರೈತ

ತಮ್ಮ ಸಾವಯವ ತೋಟದಲ್ಲಿ ಪ್ರದೀಪ್ ಸೂರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕುಳಾಯಿ-ಹೊಸಬೆಟ್ಟು ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರದೀಪ್ ಸೂರಿ ಇದೀಗ ಜನಪ್ರಿಯ ಸಾವಯವ ಕೃಷಿಕರಾಗಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಪ್ರದೀಪ್ ಸೂರಿ ತರಕಾರಿ ಬೆಳೆಸುವ ಉದ್ದೇಶದಿಂದಲೇ 14 ಸೆಂಟ್ಸ್ ಜಾಗ ಖರೀದಿಸಿದ್ದರು. ಅಂದಿನಿಂದ ಅವರು ತಮ್ಮ ಜಾಗದಲ್ಲಿ ತರಕಾರಿ ಬೆಳೆಸುತ್ತಾ ಬಂದಿದ್ದು, ಕಳೆದ 10 ವರ್ಷದಿಂದ ಅವರು ತರಕಾರಿಗಾಗಿ ಮಾರುಕಟ್ಟೆಗೆ ಅಲೆದಾಡುತ್ತಿಲ್ಲ. ಹೌದು, ಮನೆ ಖರ್ಚಿಗೆ ಬಳಸಿ ಉಳಿದ ತರಕಾರಿಗಳನ್ನು ಕಳೆದ ಎರಡೂವರೆ ವರ್ಷಗಳಿಂದ ಗ್ರಾಹಕರು ಮತ್ತು ಸಾವಯವ ಕೃಷಿಕರನ್ನು ಒಳಗೊಂಡಿರುವ `ಸಾವಯವ ಕೃಷಿಕ ಗ್ರಾಹಕ ಬಳಗ’ ಎಂಬ ಗುಂಪಿನ  ಸಹಾಯದಿಂದ ಪಂಜೆ ಮಂಗೇಶರಾವ್ ರಸ್ತೆಯಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಸೂರಿಯವರ ತರಕಾರಿಗಳು ಮಾರುಕಟ್ಟೆಗೆ ತಲುಪಿ ಗಂಟೆಗಳೊಳಗೆ ಖಾಲಿಯಾಗುತ್ತದೆ ಎಂದು ಬಳಗದ ಕಾರ್ಯದರ್ಶಿ ಕೆ ರತ್ನಾಕರ ಕುಳಾಯಿ ಹೇಳಿದ್ದಾರೆ.

ಸೂರಿ ಒಂದು ವರ್ಷದ ಹಿಂದೆಯಷ್ಟೆ ಕೆನರಾ ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾಗಿದ್ದಾರೆ. ಅವರು ತಮ್ಮ ಜಾಗದಲ್ಲಿ ಸೊಪ್ಪು, ತರಕಾರಿ, ಸೋರೆಕಾಯಿ, ಬದನೆ, ಪಪ್ಪಾಯಿ, ಬಾಳೆಹಣ್ಣು, ಬೀನ್ಸ್, ಹಸಿಮೆಣಸಿನಕಾಯಿ ಮತ್ತು ಬ್ರಾಹ್ಮಿ ಎಲೆಗಳನ್ನು ಬೆಳೆಯುತ್ತಿದ್ದಾರೆ. ಸೂರಿ ಉದ್ಯೋಗದಲ್ಲಿದ್ದಾಗ ಸಹೋದ್ಯೋಗಿಗಳು ಮತ್ತು ನೆರೆಕರೆಯವರು ಅವರ ತರಕಾರಿಗಳನ್ನು ಖರೀದಿಸುತ್ತಿದ್ದರು.

ಸಾವಯವ ಕೃಷಿಯಲ್ಲಿ ಉತ್ಸುಕರಾಗಿರುವ ಸೂರಿ ತಮ್ಮ ಬೆಳೆಗೆ ದನದ ಮೂತ್ರ, ಕಹಿಬೇವಿನ ಎಣ್ಣೆ ಮತ್ತು ಹುಳಿ ಮಜ್ಜಿಗೆಯನ್ನು ಕ್ರಿಮಿನಾಶಕವಾಗಿ ಬಳಸುತ್ತಿದ್ದಾರೆ.

ನೆಲದ ಕೃಷಿಯಲ್ಲಿ ಯಶಸ್ವಿಯಾದ ಬಳಿಕ ಸೂರಿ ತನ್ನ ತರಕಾರಿ ಗಿಡಗಳನ್ನು ಮನೆಯ ಟೆರೆಸ್ಸಿಗೂ ವಿಸ್ತರಿಸಿದರು. ಟೆರೇಸ್ ಮೇಲೆ ದ್ರಾಕ್ಷಿ ಬಳ್ಳಿ ಬೆಳೆದಿದ್ದು, ಅವುಗಳು ಈಗ ಹಣ್ಣು ಕೊಡಲಾರಂಭಿಸಿವೆ.