ಏ 1ರಿಂದ ನ 9ರವರೆಗಿನ ಬ್ಯಾಂಕ್ ಠೇವಣಿ ಪರಿಶೀಲನೆ

ನವದೆಲಿ : 2016ರ ಏಪ್ರಿಲ್ 1ರಿಂದ ನವಂಬರ್ 9ರವರೆಗಿನ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯಲ್ಲಿ ಜಮಾ ಮಾಡಲಾದ ಎಲ್ಲ ಮೊತ್ತದ ಮಾಹಿತಿಯನ್ನು ಫೆಬ್ರವರಿ 28, 2017ರ ಒಳಗಾಗಿ ವರದಿ ಮಾಡುವಂತೆ ಕೇಂದ್ರ ವಿತ್ತ ಸಚಿವಾಲಯ ಎಲ್ಲ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.  ತಮ್ಮ ಖಾತೆ ತೆರೆಯುವ ಸಂದರ್ಭದಲ್ಲಿ ಪಾನ್ ಕಾರ್ಡ್ ಅಥವಾ ನಮೂನೆ 60 ಸಲ್ಲಿಸದಿರುವವರು ಇದೇ ತಾರೀಖಿನ ಒಳಗಾಗಿ ಬ್ಯಾಂಕುಗಳಿಗೆ ಸಲ್ಲಿಸುವಂತೆ ಗ್ರಾಹಕರಿಗೆ ಆದೇಶಿಸಲಾಗಿದೆ.

ಇದಕ್ಕೂ ಮುನ್ನ ನವಂಬರ್ 8ರ ನಂತರ ಎರಡೂವರೆ ಲಕ್ಷಕ್ಕೂ ಹೆಚ್ಚು ಹಣ ಜಮಾ ಮಾಡಿದವರ ಮಾಹಿತಿ ನೀಡಲು ಕೋರಲಾಗಿತ್ತು. ಚಾಲ್ತಿ ಖಾತೆಗಳಲ್ಲಿ ರೂ 12.5 ಲಕ್ಷಕ್ಕೂ ಹೆಚ್ಚು ಹಣ ಜಮಾ ಮಾಡಿದ್ದರೂ ವರದಿ ಮಾಡುವಂತೆ ಕೋರಲಾಗಿತ್ತು. ಅಮಾನ್ಯೀಕರಣದ ನಂತರ ಬೃಹತ್ ಮೊತ್ತದ ಎಲ್ಲ ನಗದು ವಹಿವಾಟುಗಳನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೃಹತ್ ಮೊತ್ತದ ಎಲ್ಲ ನಗದು ವಹಿವಾಟು ಮತ್ತು ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದು ಅಕ್ರಮ ಹಣದ ಮೇಲೆ ನಿಗಾ ಇರಿಸಿರುವುದಾಗಿ ಜೈಟ್ಲಿ ಹೇಳಿದ್ದಾರೆ. ಅಮಾನ್ಯೀಕರಣದ ನಂತರ ಬ್ಯಾಂಕುಗಳಿಗೆ ಎಷ್ಟು ಹಣ ಜಮಾ ಮಾಡಲಾಗಿದೆ ಎಂದು ಆರ್‍ಬಿಐ ಈವರೆಗೂ ಮಾಹಿತಿ ನೀಡಿಲ್ಲ.