`ಅದೊಂದು ಸಾಮೂಹಿಕ ಲೈಂಗಿಕ ಕಿರುಕುಳವಾಗಿತ್ತು’

ಬೆಂಗಳೂರು ಹೊಸ ವರ್ಷಾಚರಣೆ ಘಟನೆಯ ಪ್ರತ್ಯಕ್ಷದರ್ಶಿಗಳು

ಬೆಂಗಳೂರು : ರಾಜ್ಯ ರಾಜಧಾನಿಯ ಎಂ ಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಸಾವಿರಾರು ಮಂದಿ ಸೇರಿದ್ದ ಸಂದರ್ಭದಲ್ಲಿ ಹಲವು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದ ಘಟನೆ ದೇಶದಾದ್ಯಂತ ಬಹಳಷ್ಟು ಸುದ್ದಿಯಾಗಿದ್ದು ಅದೊಂದು `ಸಾಮೂಹಿಕ ಲೈಂಗಿಕ ಕಿರುಕುಳವಾಗಿತ್ತು’ ಎಂದು ಪ್ರತ್ಯಕ್ಷದರ್ಶಿ ಯುವತಿಯೊಬ್ಬರು ಬಣ್ಣಿಸಿದ್ದಾರೆ. “ಅಲ್ಲಿ ಹಾಜರಿದ್ದ ಪುರುಷರು ಉದ್ದೇಶಪೂರ್ವಕವಾಗಿಯೇ ಯುವತಿಯರ ಮೈ ಮುಟ್ಟುತ್ತಿದ್ದರು ಹಾಗೂ ಪರಚುತ್ತಿದ್ದರು. ಅಲ್ಲಿ ಸಾಕಷ್ಟು ಜನಜಂಗುಳಿಯಿದ್ದುದರಿಂದ ಅದರ ದುರ್ಲಾಭ ಪಡೆಯಲು ಅವರು ಯತ್ನಿಸಿದ್ದರು” ಎಂದು ಆ ದಿನದ ಘೋರ ಅನುಭವವನ್ನು ಆಕೆ ನೆನಪಿಸಿಕೊಂಡಿದ್ದಾರೆ.
ಈ ದಿನದ ಘಟನೆಯನ್ನು ಹಲವರು ವಿವರಿಸಿದ್ದು, ಅಲ್ಲಿ ವಸ್ತುಶಃ ಕಾಲ್ತುಳಿತದ ಸ್ಥಿತಿಯಿತ್ತು. “ಹುಡುಗಿಯರು ಕೂಗುತ್ತಾ ಸಹಾಯ ಯಾಚಿಸುತ್ತಿದ್ದರು” ಎಂದು ಒಬ್ಬರು ವಿವರಿಸಿದ್ದಾರೆ. ಒಬ್ಬಳು ಯುವತಿ ಆಘಾತ ಸಹಿಸಲಾರದೆ ಪ್ರಜ್ಞಾಹೀನಳಾದರೆ, ಇನ್ನೊಬ್ಬಳು ಧೈರ್ಯದಿಂದ ತನ್ನ ಚಪ್ಪಲಿ ಕೈಗೆತ್ತಿಕೊಂಡು ಹಿಂಸೆ ನೀಡಲು ಯತ್ನಿಸಿದವರನ್ನು ಹಿಮ್ಮೆಟ್ಟಿಸಲು ಯತ್ನಿಸಿದ್ದಳು ಎಂದು ಕೆಲವರು ಹೇಳಿದ್ದಾರೆ.


“ಅಲ್ಲಿ ಸಾಕಷ್ಟು ಮಂದಿ ಪೊಲೀಸರಿರಲಿಲ್ಲ. ಹೆಚ್ಚಿನವರು ಮದ್ಯದ ಅಮಲಿನಲ್ಲಿದ್ದರು ಹಾಗೂ ಒಬ್ಬರನ್ನೊಬ್ಬರು ತಳ್ಳುತ್ತಿದ್ದರು ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದರು. ಒಬ್ಬಳೇ ಒಬ್ಬಳು ಯುವತಿಯನ್ನು ಅವರು ಕಿರುಕುಳ ನೀಡದೆ ಬಿಡಲಿಲ್ಲ” ಎಂದು ಇನ್ನೊಬ್ಬರು ವಿವರಿಸಿದ್ದಾರೆ.
“ಯುವತಿಯೊಬ್ಬಳ ಮೈಯ್ಯಲ್ಲೆಲ್ಲಾ ಗೀರಿದ ಗಾಯಗಳಾಗಿದ್ದವು ಹಾಗೂ ರಕ್ತ ಒಸರುತ್ತಿತ್ತು, ದಾಳಿಕೋರರು ಹಲವು ಯುವತಿಯರ ಕೂದಲು ಹಿಡಿದು ಅವರ ಬಟ್ಟೆಗಳನ್ನು ಎಳೆದಾಡಿದರು” ಎಂದು ಹಲವರು ಆ ಘೋರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.