`ಹೆದ್ದಾರಿ ಮದ್ಯದಂಗಡಿ ಮೇಲಿನ ನಿಷೇಧದಿಂದ ಪ್ರಯೋಜನವಿಲ್ಲ ‘

ಬೆಂಗಳೂರು : “ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿನ  ಮದ್ಯದಂಗಡಿಗಳನ್ನು ಮುಚ್ಚಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಈ ನಿಷೇಧದ ಹೊರತಾಗಿಯೂ ರಸ್ತೆಯಲ್ಲಿ ಸಂಚರಿಸುವವರು ತಮಗೆ ಅಗತ್ಯವಿರುವ ಮದ್ಯ ಪಡೆದು ಸೇವಿಸುತ್ತಾರೆ” ಎಂದು  ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಸಂತೋಷ್ ಹೆಗ್ಡೆ ಹೇಳಿದ್ದಾರೆ.

“ಮದ್ಯ ಸೇವಿಸಿ ವಾಹನ ಚಲಾಯಿಸುವುದನ್ನು ತಡೆಯಬೇಕೆಂಬ  ಇಚ್ಛೆ ಸರಕಾರಕ್ಕಿದ್ದರೆ, ಟ್ರಾಫಿಕ್ ಪೊಲೀಸರು ನಿಯಮಿತವಾಗಿ ವಾಹನಗಳ ತಪಾಸಣೆ ಕಾರ್ಯ ಕೈಗೊಳ್ಳಬೇಕು ಹಾಗೂ ಹೆದ್ದಾರಿ ಗಸ್ತು ತಂಡಗಳೂ ಸಕ್ರಿಯವಾಗಬೇಕು. ಮದ್ಯ ಮಾರಾಟ ಮಳಿಗೆಗಳನ್ನು ನಿಷೇಧಿಸುವುದರಿಂದ ಕುಡಿದು ವಾಹನ ಚಲಾಯಿಸುವುದನ್ನು  ಇಲ್ಲವೇ  ಇದರಿಂದುಂಟಾಗುವ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ”ಎಂದಿದ್ದಾರೆ ಜಸ್ಟಿಸ್ ಹೆಗಡೆ.

“ಮದ್ಯ ಸೇವನೆ ಮೂಲಭೂತ ಹಕ್ಕು ಅಲ್ಲದೇ ಇದ್ದರೂ ಸುಪ್ರೀಂ ಕೋರ್ಟಿನ ಈ ಆದೇಶದಿಂದ ಹೆದ್ದಾರಿ ಪಕ್ಕದ ಮದ್ಯದಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.  ಈ ನಿಷೇಧದಿಂದುಂಟಾಗುವ ರೂ 2000 ಕೋಟಿಯಿಂದ ರೂ 3000 ಕೋಟಿ ತನಕದ ಆರ್ಥಿಕ ನಷ್ಟವು ರಾಜ್ಯ ಸರಕಾರದ ಆದಾಯವನ್ನು ಬಾಧಿಸುವುದು ಹಾಗೂ ಇದು  ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರುವುದು” ಎಂದು ಅವರು ಹೇಳಿದ್ದಾರೆ.