`ಕಪ್ಪು’ ರಾಜಕಾರಣಿಗಳನ್ನೂ ಅಮಾನ್ಯಗೊಳಿಸಿ

ಕಪ್ಪು ಹಣ ದೇಶದ ಆರ್ಥಿಕ ವ್ಯವಸ್ಥೆಯನ್ನು ದುರವಸ್ಥೆಯತ್ತ ಕೊಂಡೊಯ್ಯುತ್ತಿದೆ ಎನ್ನುವ ನೆಪದಲ್ಲಿ, 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ. ಒಂದು ಕಡೆ ಇದು ಒಳ್ಳೆಯ ಸ್ವಚ್ಛó ಆರ್ಥಿಕ ನೀತಿ ಎಂದು ಜನತೆ ಹೇಳುತ್ತಿದ್ದರೂ ಅನಿರೀಕ್ಷಿತವಾಗಿ ಅನುಷ್ಠಾನಕ್ಕೆ ತಂದಿರುವುದು ಸಾಮಾನ್ಯ ಜನರಿಗೆ ಬಿಸಿ ತುಪ್ಪುವಾಗಿದೆ ಮತ್ತ್ತು ದಿನನಿತ್ಯದ ಖರ್ಚಿಗೆ ದುಡ್ಡು ಇದ್ದರೂ ಇಲ್ಲದಂತಾಗಿ ಹೇಳಲಾಗದ ಕಷ್ಟ ಕಾರ್ಪಣ್ಯಗಳನ್ನು ಹೇರಿದೆ ಎನ್ನುವುದು ಕಟುಸತ್ಯ.

ಅಂತೆಯೇ `ಕಪ್ಪು’ ರಾಜಕಾರಣಿಗಳನ್ನೂ ಅಮಾನ್ಯಗೊಳಿಸಿದರೆ ನಮ್ಮ ನಾಡಿನಲ್ಲಿ ಸ್ವಚ್ಛ ರಾಜಕೀಯ ವ್ಯವಸ್ಥೆ ಸುಭದ್ರವಾಗುವುದರಲ್ಲಿ ಸಂಶಯವಿಲ್ಲ. ಈ `ಕಪ್ಪು’ ರಾಜಕಾರಣಿಗಳು ತಮ್ಮ ಮೇಲೆ ಸಾಕಷ್ಟು ಅಪರಾಧ ಪ್ರಕರಣಗಳು ಮತ್ತು ಇತರೆ ಮೊಕದ್ದಮೆಗಳೂ ದಾಖಲಾಗಿದ್ದರೂ, ಬಂಧಿಖಾನೆ ವಾಸಿಗಳಾಗಿದ್ದರೂ ಪ್ರಜಾಪ್ರಭುತ್ವದ ಶಾಸಕಾಂಗ ವ್ಯವಸ್ಥೆಯಲ್ಲಿರುವ ಮತ್ತು ಸಂವಿಧಾನದಲ್ಲಿರುವ `ತೂತುಗಳ’ ಮೂಲಕ ನುಸುಳಿ ಪುನಃ ಪುನಃ ಚುನಾವಣೆಗಳಲ್ಲಿ ಗೆದ್ದು ಬಂದು ಸಂಸತ್ತು ಮತ್ತು ಸದನಗಳಲ್ಲಿ ಕೂತು ಜನತೆಯನ್ನು ಮೂರ್ಖರನ್ನಾಗಿಸುತ್ತಿದ್ದಾರೆ.

ಈ ಪ್ರಭಾವಿ ರಾಜಕೀಯ ವ್ಯಕ್ತಿಗಳು ರಾಜಾರೋಷವಾಗಿ ಸಂಸತ್ ಮತ್ತು ಸದನಗಳಲ್ಲಿ ಭಂಡತನದಿಂದ ಕುಳಿತು ಕಪ್ಪು ಹಣ ಮತ್ತು ಅದರಿಂದಾಗುತ್ತಿರುವ ಅವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಅರ್ಹರೇ ? ಅವರನ್ನು ಅಮಾನ್ಯಗೊಳಿಸಲು ಈಗಿರುವ ಸಂವಿಧಾನಾತ್ಮಕ ವಿಧಿ ವಿಧಾನಗಳು ಮತ್ತು ಕಾನೂನು ಕಟ್ಟಳೆಗಳು ಸಾಕಷ್ಟಿವೆ. ಆದರೂ ಅವರನ್ನು ಹೊರಗಿಡುವ ಪ್ರಯತ್ನ ಮಾಡಿಲ್ಲ ಏಕೆ ?

ಕೆಲವು ಸಮೀಕ್ಷೆಗಳ ಪ್ರಕಾರ 2014ರ ಮಹಾಚುನಾವಣೆಯಲ್ಲಿ ಗೆದ್ದಿರುವ ವಿವಿಧ ಪಕ್ಷಗಳ 165 ಸಂಸದರ ಮೇಲೆ ವಿವಿಧ ರೀತಿಯ ಮೊಕದ್ದಮೆಗಳು ದಾಖಲಾಗಿವೆ ಮತ್ತು ಅವು ಇನ್ನೂ ಅಂತಿಮಗೊಂಡಿಲ್ಲ. ಇಂತಹವರು ರಾಜ್ಯ ವಿಧಾನಸಭೆಯಲ್ಲೀ ಇದ್ದಾರೆ.

ಹಾಗಾಗಿ ಇಂದಿನ ಸರಕಾರ ಇಂತಹ ಭ್ರಷ್ಟ ರಾಜಕಾರಣಿಗಳನ್ನು ಅಧಿಕಾರದಿಂದಿಳಿಸಲು  ಮುಂದಿನ ಚುನಾವಣೆಯಲ್ಲಿ ಅಗತ್ಯ ಸುಧಾರಣೆಗಳನ್ನು ತಂದು ಕಪ್ಪು ರಾಜಕೀಯ ವ್ಯಕ್ತಿಗಳನ್ನು ಅಮಾನ್ಯಗೊಳಿಸಲಿ. ಸರಕಾರ ಭಾರತದಲ್ಲಿ ಸ್ವಚ್ಛ ರಾಜಕೀಯ ವ್ಯವಸ್ಥೆ ನಿರ್ಮಾಣ ಮಾಡಲು ಪಣ ತೊಡಬೇಕಿದೆ.

  • ನವೀನ್ ಕುರ್ನಾಡ್