ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ : ಹಳಸಿದ ಆಹಾರ ವಶ, ಬೇಕರಿ ಬಂದ್

ನಮ್ಮ ಪ್ರತಿನಿಧಿ ವರದಿ

 ಕಾಸರಗೋಡು : ಆರೋಗ್ಯ ಇಲಾಖೆ ಅಧಿಕಾರಿಗಳು ಹೋಟೆಲ್ ಹಾಗೂ ಬೇಕರಿಗಳಿಗೆ  ನಡೆಸಿದ ಮಿಂಚಿನ ತಪಾಸಣೆಯಲ್ಲಿ ಹಲವಾರು ಹಳಸಿದ ಆಹಾರ ಪದಾರ್ಥವನ್ನು ವಶಪಡಿಸಿದ ಘಟನೆ ನಡೆದಿದೆ.

ಶುಚಿತ್ವ ಕಾಪಾಡಲು ವಿಫಲವಾದ ಮಧೂರಿನ ಒಂದು ಬೇಕರಿ ಉತ್ಪನ್ನ ತಯಾರಿ ಕೇಂದ್ರವನ್ನು ಮೊಗ್ರಾಲ್ ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಲ್ತ್ ಇನ್‍ಸ್ಪೆಕ್ಟರ್ ನೇತೃತ್ವದ ತಂಡವೊಂದು ಮುಚ್ಚಿಸಿದೆ.

ಇಲ್ಲಿ ತಪಾಸಣೆಗಾಗಿ ತಲುಪಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕಂಡ ದೃಶ್ಯ ಭಯಾನಕವಾಗಿತ್ತು. ಹಟ್ಟಿಗಿಂತಲೂ ಕೊಳಕಾದ ಸ್ಥಳದಲ್ಲಿ ಇಲ್ಲಿ ತಿಂಡಿ ತಿನಸುಗಳನ್ನು ತಯಾರಿಸಲಾಗುತ್ತಿತ್ತು. ಇದರಿಂದ ಸಂಸ್ಥೆಯನ್ನು ಮುಚ್ಚುಗಡೆಗೊಳಿಸಿದ ಅಧಿಕಾರಿಗಳು ಶಟರ್ ಗೆ  ನೋಟೀಸು ಲಗತ್ತಿಸಿದ್ದಾರೆ.

ಚೆಂಗಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಚೆಂಗಳದ  8 ಹೋಟೆಲ್‍ಗಳು, ಒಂದು ಹಣ್ಣುಹಂಪಲು ಅಂಗಡಿಗೂ ದಾಳಿ ನಡೆಸಿದ್ದಾರೆ. ಹಳಸಿದ ಆಹಾರ ವಸ್ತುಗಳನ್ನು ವಶಪಡಿಸಿದ ಅಧಿಕಾರಿಗಳು ಹೋಟೆಲ್ ಮಾಲಕರಿಗೆ ನೋಟೀಸು ನೀಡಿದ್ದಾರೆ. ಹೋಟೆಲ್‍ಗಳು, ಕೂಲ್ ಬಾರ್ ಮೊದಲಾದೆಡೆ ದಾಳಿ ನಡೆಸಲಾಯಿತು. ಇಲ್ಲಿಂದ ಹಳಸಿದ ಆಹಾರ ಪದಾರ್ಥ ಹಾಗೂ ತಂಪು ಪಾನೀಯಗಳನ್ನು ವಶಪಡಿಸಲಾಯಿತು.