ದೇವಳ ಕಾರ್ಯಕ್ರಮ ನೆಪದಲ್ಲಿ ಮುಸ್ಲಿಂ ಮದುವೆ ಸ್ಥಳ ಬದಲಿಸಿದ ಬಜರಂಗಿಗಳು ?

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹೂಡೆ ಸಮೀಪದ ಕೋಡಿಬೇಂಗ್ರೆಯ ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶೋತ್ಸವದ ನೆಪವೊಡ್ಡಿ ಕೋಡಿಬೇಂಗ್ರೆಯ ನಿವಾಸಿ ಯಾಸೀನ್ ಎಂಬವರ ಮನೆಯಲ್ಲಿ ಭಾನುವಾರ ನಡೆಯಬೇಕಾಗಿದ್ದ ಮದುವೆಯನ್ನು ಬಜರಂಗದಳದ ಕಾರ್ಯಕರ್ತರು ಬಲತ್ಕಾರವಾಗಿ ಸ್ಥಳಾಂತರಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.

ಯಾಸೀನ್ ಕೋಡಿಬೇಂಗ್ರೆ ಎಂಬವರ ಮದುವೆಯು ಅವರ ಮನೆಯಲ್ಲಿ ಭಾನುವಾರ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಸುಮಾರು 200 ಮಂದಿ ಬಜರಂಗದಳ ಕಾರ್ಯಕರ್ತರು ಮದುವೆಗೆ ಹೋಗುವ ದಾರಿಯನ್ನು ಬಲಾತ್ಕಾರವಾಗಿ ಮುಚ್ಚಿದ್ದರು. ಈ ಬಗ್ಗೆ ಯಾಸೀನ್ ಮನೆಯವರು ಪ್ರಶ್ನಿಸಿದಾಗ ಕೋಡಿಬೇಂಗ್ರೆ ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶೋತ್ಸವ ನಡೆಯುವುದರಿಂದ ಮೂರು ದಿನಗಳ ಕಾಲ ಯಾರೂ ಕೂಡಾ ಮಾಂಸ ಸೇವಿಸುವಂತಿಲ್ಲ ಎಂದು ಬಜರಂಗಳದಳವರು ಬಿಗಿಪಟ್ಟು ಹಿಡಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಯಾಸೀನ್ ಮನೆಯವರ ಹಾಗೂ ಬಜರಂಗದಳದವರ ಮಧ್ಯೆ ವಾಗ್ವಾದ ಉಂಟಾಗಿ, ಬಿಗುವಿನ ವಾತಾವರಣ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ. ಬಳಿಕ ಮದುವೆ ನಿರಾಂತಕವಾಗಿ ನಡೆಯಲಿ ಎಂಬ ಉದ್ದೇಶದಿಂದ ದೇವಳದಿಂದ ಒಂದು ಕಿಲೋಮೀಟರ್ ದೂರವಿದ್ದ ಮದುವೆಯನ್ನು 5 ಕಿಲೋಮೀಟರ್ ದೂರವಿರುವ ಜದೀದ್ ಮಸೀದಿಗೆ ಸ್ಥಳಾಂತರಿಸಲಾಯಿತು.

ಇಲ್ಲಿಯವರೆಗೆ ಸೌಹಾರ್ದಯುತವಾಗಿ ಇದ್ದ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜಿಸಿ, ಶಾಂತಿ ಕದಡುವ ಪ್ರಯತ್ನ ಇದಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.