ಬಾಲಕಿ ಅತ್ಯಾಚಾರಕ್ಕೆ ಯತ್ನ

ಬಜರಂಗಿ ಬಂಧನ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಬಜರಂಗದಳದ ಮುಖಂಡನ ಆಪ್ತನಾಗಿರುವ ಬಜರಂಗಿಯೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿದ ಹೇಯ ಕೃತ್ಯ ಧರ್ಮಸ್ಥಳ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಘಟನೆಯ ಬೆನ್ನಲ್ಲೇ ಬಜರಂಗದಳ ಮುಖಂಡರು ಆರೋಪಿಯನ್ನು ರಕ್ಷಿಸಲು ಹರಸಾಹಸಪಡುತ್ತಿರುವ ವಿಚಾರ ಸ್ಥಳೀಯವಾಗಿ ಸಂಶಯಕ್ಕೆ ಕಾರಣವಾಗಿದೆ.

ನಿಡ್ಲೆ ಗ್ರಾಮದ ಶಂಕರಡ್ಕ ಎಂಬಲ್ಲಿನ ನಿವಾಸಿ ಬಜರಂಗದಳದ ಸಕ್ರಿಯ ಕಾರ್ಯಕರ್ತ ಉಮೇಶ್ ಪೂಜಾರಿ (25) ಎಂಬಾತನೇ ಸ್ಥಳೀಯ ಶಾಲೆಯೊಂದರ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿದ್ದಾನೆ.

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಉಮೇಶ್ ಬಜರಂಗದಳದ ಮುಖಂಡನ ಆಪ್ತನಾಗಿದ್ದು ಧರ್ಮಸ್ಥಳ, ಉಜಿರೆ, ಕೊಕ್ಕಡ ಸುತ್ತಮುತ್ತಲಿನ ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವವನಾಗಿದ್ದಾನೆ. ಡಿ 24ರಂದು ಬಾಲಕಿ ಒಬ್ಬಂಟಿಯಾಗಿರುವಾಗ ಅಕ್ರಮವಾಗಿ ಮನೆಗೆ ನುಗ್ಗಿ ಈ ಕೃತ್ಯವೆಸಗಿದ್ದಾನೆ.

ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಬಜರಂಗದಳದ ಮುಖಂಡನೊಬ್ಬ ಧರ್ಮಸ್ಥಳ ಪೊಲೀಸರಿಗೆ ಒತ್ತಡ ಹಾಕಿ ಆರೋಪಿಯ ರಕ್ಷಣೆಗೆ ಯತ್ನಿಸಿ ಪ್ರಾರಂಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯಕ್ಕೊಳಗಾದ ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ (172/16, 448, 354 ಮತ್ತು 7,8) ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.