ನೀರಿನ ಒಳಹರಿವಿನೊಂದಿಗೆ ಬಜೆ ಅಣೆಕಟ್ಟಿಗೆ ಮರುಜೀವ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬಜೆ ಅಣೆಕಟ್ಟಿನಲ್ಲಿ ಉತ್ತಮ ನೀರಿನ ಒಳಹರಿವು ಕಾಣಿಸಿಕೊಂಡಿದ್ದು, ಅಣೆಕಟ್ಟಿಗೆ ಮರುಜೀವ ಬಂದಂತಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವರದಿಯ ಪ್ರಕಾರ ಭಾನುವಾರದಿಂದ ಸೋಮವಾರ ಬೆಳಗ್ಗೆ 8.30ರವರೆಗೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಗೆ 95.1 ಮಿ ಮೀ ಮಳೆಯಾಗಿದೆ.

ಜೂನ್ 6ರಿಂದ 12ರವರೆಗೆ 7 ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 424.9 ಮಿ ಮೀ ಮಳೆಯಾಗಿದೆ. ಸಾಮಾನ್ಯ ನಿರೀಕ್ಷೆಗಿಂತ ಶೇಕಡಾ 89ರಷ್ಟು ಹೆಚ್ಚು ಮಳೆಯಾಗಿದೆ. ಈ ವರ್ಷ ಜಿಲ್ಲೆಯು ತೀವ್ರವಾದ ನೀರಿನ ಬರಗಾಲ ಎದುರಿಸಿದ್ದು, ಇದೇ ಮೊದಲ ಬಾರಿಗೆ ಬರಪೀಡಿತ ಜಿಲ್ಲೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿತ್ತು. ಬಜೆ ಅಣೆಕಟ್ಟಿನ ನೀರಿನ ಮಟ್ಟ ತೀವ್ರ ಕುಸಿದಿತ್ತು. ಮಾರ್ಚ್ 24ರಿಂದ ನಗರದಲ್ಲಿ ಪಡಿತರ ರೂಪದಲ್ಲಿ ನೀರಿನ ಬಿಡುಗಡೆ ಆರಂಭವಾಗಿತ್ತು.

“ಬಜೆ ಅಣೆಕಟ್ಟಿನ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀರಿನ ಒಳಹರಿವು ಕೂಡ ಉತ್ತಮವಾಗಿದೆ. ಪ್ರಸಕ್ತ ಅಣೆಕಟ್ಟಿನಲ್ಲಿ ತುಂಬಿರುವ ನೀರಿನ ಮಟ್ಟ ಮುಂದಿನ 6 ತಿಂಗಳವರೆಗೆ ನಗರಕ್ಕೆ ನೀರು ಪೂರೈಸಲು ಸಾಕಾಗಬಹುದು” ಎಂದು ನಗರಸಭೆ ಪರಿಸರ ಇಂಜಿನಿಯರ್ ಬಿ ಎಸ್ ರಾಘವೇಂದ್ರ ಹೇಳಿದ್ದಾರೆ.