ಮನಪಾದ ಸೌಲಭ್ಯ ವಂಚಿತ ವಾರ್ಡ್ ಬಜಾಲ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನಪಾ ಸೌಲಭ್ಯ ವಂಚಿತ ಕ್ಷೇತ್ರಕ್ಕೆ ಜ್ವಲಂತ ಉದಾಹರಣೆಯೆಂದರೆ ಅದು ಬಜಾಲ್ ವಾರ್ಡ್.

ಸುಮಾರು 15 ವರ್ಷಗಳ ಹಿಂದೆ ಪಾಂಡಾಲಗುಡ್ಡೆ, ಶಾಂತಿನಗರ, ಕಲ್ಲಕಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕಣ್ಣೂರು ಗ್ರಾಮ ಪಂಚಾಯಿತಿನಿಂದ ಬೇರ್ಪಡಿಸಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡಿಸಿದಾಗ ನಿವಾಸಿಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ ಇಂದು ಅದೇ ಜನ ನಗರ ಸೌಲಭ್ಯಗಳೇ ನಮ್ಮ ಬಳಿಗೆ ಸುಳಿದಾಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈಗಲೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾವು ಸ್ಥಿರವಾಗಿದ್ದೇವೆ. ನಗರಕ್ಕೆ ಸಿಗಬೇಕಾದ ಯಾವುದೇ ಸೌಲಭ್ಯಗಳು ನಮಗೆ ದೊರೆಯುತ್ತಿಲ್ಲ ಎಂಬುದು ವಾರ್ಡಿನ ಜನತೆಯ ಅಳಲು.

ವಾಹನ ಚಲಿಸಲಾರದ ರಸ್ತೆಗಳು, ಕಳೆಗುಂದಿರುವ ಮಾರ್ಗಗಳು, ದುರ್ಬಲ ಕುಡಿಯುವ ನೀರಿನ ಸೌಲಭ್ಯ, ಡ್ರೈನೇಜ್ ಸಂಪರ್ಕವಿಲ್ಲ, ಬೀದಿ ದೀಪಗಳ ಅವಶೇಷಗಳು ಮಾತ್ರ ಉಳಿದುಕೊಂಡಿರುವ ಬೀದಿಗಳು, ಬಸ್ ಸೇವೆಗಳಿಂದ ವಂಚಿತವಾಗಿರುವ ಪ್ರದೇಶಗಳು.

ಇಲ್ಲಿನ ನಿವಾಸಿಗಳಿಗಂತು ನಗರ ಪ್ರದೇಶದಲ್ಲಿದ್ದೇವೆ ಎಂಬ ಯಾವ ಭಾವನೆಯೂ ಹುಟ್ಟುತ್ತಿಲ್ಲ. ಕಾರಣ ಕುಗ್ರಾಮದ ವಾತಾವರಣ ಇಲ್ಲಿ ಇನ್ನೂ ಮರೆಯಾಗಿಲ್ಲ. ಸಂಚಾರಕ್ಕೆ ಸಾಕಾಗುವಷ್ಟು ರಿಕ್ಷಾಗಳೂ ಇಲ್ಲ. ನಿವಾಸಿಗಳು ಮೂಲಸೌಕರ್ಯಗಳಿಗಾಗಿ ಬೇಡಿಕೆ ಇಡುತ್ತಾ ಬಂದಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಲು ವಿಫಲವಾಗಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಕರೆಯುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಈ ಪ್ರದೇಶಗಳು ಒಟ್ಟು ಸುಮಾರು 800ರಿಂದ 850ರಷ್ಟು ಜನಸಂಖ್ಯೆ ಹೊಂದಿದೆ. ಆದರೆ ಇಲ್ಲಿನ ಜನತೆ ಪ್ರತಿದಿನವನ್ನು ಬಹಳ ಸಂಕಷ್ಟದಲ್ಲಿಯೇ ಕಳೆಯುತ್ತಿದ್ದಾರೆ. ಪಾಂಡಲಗುಡ್ಡೆಯ ನಿವಾಸಿಗಳಂತು ಪ್ರತಿದಿನ ವ್ಯವಹಾರಕ್ಕೆ ವಾಹನ ಪಡೆಯುವುದಕ್ಕೆ ಪ್ರಯಾಸಪಡುತ್ತಿದ್ದಾರೆ.

“ಮನಪಾ ವ್ಯಾಪ್ತಿಯ ಪ್ರದೇಶಗಳು ಇನ್ನೂ ಕುಗ್ರಾಮಗಳ ಪರಿಸ್ಥಿತಿಯಲ್ಲಿವೆ ಎಂಬುದು ನಿಜಕ್ಕೂ ಗಂಭೀರವಾದ ವಿಚಾರವೇ ಸರಿ. ಸ್ಥಳೀಯ ಕಾರ್ಪೊರೇಟರ್ ಅಭಿವೃದ್ಧಿ ಕೆಲಸಗಳನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ ಎಂದರೆ ಅವರು ವಾರ್ಡ್ ಪ್ರತಿನಿಧಿಯಾಗಿದ್ದು ಏನು ಪ್ರಯೋಜನ” ಎಂದು ಡಿವೈಎಫೈ ನಾಯಕ ಸಂತೋಷಕುಮಾರ್ ಬಜಾಲ್ ಪ್ರಶ್ನಿಸಿದ್ದಾರೆ.

“ಕಾರ್ಪೊರೇಟರ್ ಮೀಸಲಾತಿ ಆಧಾರದಲ್ಲಿ ಗಂಡನ ಬದಲಿಗೆ ಆಯ್ಕೆಯಾಗಿದ್ದಾರೆ. ಜನ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಇಬ್ಬರೂ ಮಾತಿಗೆ ಸಿಗುತ್ತಿಲ್ಲ. ಇದೇ ವೇಳೆ ಮನಪಾ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ” ಎಂದು ಸ್ಥಳೀಯರಾದ ನರೇಶ್ ಜಲ್ಲಿಗುಡ್ಡೆ ಹೇಳಿದ್ದಾರೆ.

“ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ. ಹಲವು ಅಭಿವೃದ್ಧಿ ಕೆಲಸಗಳು ರಾತ್ರಿ ಬೆಳಗಾಗುವುದರಲ್ಲಿ ಆಗಲು ಸಾಧ್ಯವಿಲ್ಲ. ಹೆಚ್ಚು ಹಣಕಾಸು ಅಗತ್ಯವಿದೆ. ವಾರ್ಡ್ ಅಭಿವೃದ್ಧಿಗೆ ದೊರೆಯುತ್ತಿರುವ ಮೊತ್ತ ಸಾಕಾಗುತ್ತಿಲ್ಲ” ಎಂದು ಕಾರ್ಪೋರೇಟರ್ ಸುಮಯ್ಯ ಹೇಳಿದ್ದಾರೆ.