ಕನ್ನಡದಲ್ಲಿ ಬರಲಿದೆ `ಕುರುಕ್ಷೇತ್ರ’

1977ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ ಬಬ್ರುವಾಹನದ ನಂತರ ಸೆಟ್ಟೇರಲಿರುವ ಪ್ರಪ್ರಥಮ ಪೌರಾಣಿಕ ಚಿತ್ರ

ಬಾಹುಬಲಿ ಎಫೆಕ್ಟ್

ಬೆಂಗಳೂರು : ಎಸ್ ಎಸ್ ರಾಜಮೌಳಿಯವರ ಬ್ಲಾಕ್ ಬಸ್ಟರ್ ಚಿತ್ರ `ಬಾಹುಬಲಿ 2 : ದಿ ಕಂಕ್ಲೂಶನ್’ನಿಂದ ಪ್ರೇರಿತರಾಗಿರುವ ಕನ್ನಡ ಚಿತ್ರ ನಿರ್ಮಾಪಕ ಮತ್ತು ರಾಜಕಾರಣಿ ಎನ್ ಮುನಿರತ್ನ ಕನ್ನಡದಲ್ಲೂ ಇಂತಹ ಒಂದು ಅದ್ದೂರಿ ಚಿತ್ರ `ಕುರುಕ್ಷೇತ್ರ’ ಹೊರತರುವುದಾಗಿ ಘೋಷಿಸಿದ್ದಾರೆ. ಈ ಚಿತ್ರವನ್ನು ಕೌರವರ ಅರಸ ದುರ್ಯೋಧನನ್ನು ಕೇಂದ್ರೀಕರಿಸಿ ನಿರ್ಮಿಸಲಾಗುವುದು.

ದೊಡ್ಡ ಬಜೆಟಿನ ಈ ಪ್ರಸ್ತಾವಿತ ಚಲನಚಿತ್ರವು ಪೌರಾಣಿಕ ಕಥಾವಸ್ತು ಹೊಂದಿರುವುದರಿಂದ ಅದಕ್ಕೆ ತಕ್ಕಂತೆ ಯುದ್ಧ ದೃಶ್ಯಗಳನ್ನು ಚಿತ್ರೀಕರಿಸಲು ಅತ್ಯಾಧುನಿಕ ವಿಷುವಲ್ ಎಫೆಕ್ಟ್ಸ್ ಬಳಸಿಕೊಳ್ಳಲಾಗುವುದು. ಚಿತ್ರ ಈ ವರ್ಷದ ಜುಲೈ 23ರಂದು ಸೆಟ್ಟೇರಲಿದ್ದು ವರ್ಷಾಂತ್ಯದೊಳಗೆ ತೆರೆ ಕಾಣಬಹುದೆಂದು ನಿರೀಕ್ಷಿಸಲಾಗಿದೆ.

ಕಾಂಗ್ರೆಸ್ ಶಾಸಕರೂ ಆಗಿರುವ  ಮುನಿರತ್ನ ಈಗಾಗಲೇ ಹಲವು ಹಿಟ್ ಚಿತ್ರಗಳನ್ನು ನೀಡಿದವರು. “ಬಾಹುಬಲಿ ನಮಗೆ ಮುಂದಿನ ದಾರಿ ತೋರಿಸಿದೆ. ಬೆಂಗಳೂರು ಈಗಾಗಲೇ ದೊಡ್ಡ ಕೇಂದ್ರವಾಗಿದ್ದು ಇಲ್ಲಿ ನಮಗೆ ದೊರೆಯಬಹುದಾದ ಅವಕಾಶಗಳ ಗರಿಷ್ಠ ಪ್ರಯೋಜನ ಪಡೆಯಲುದ್ದೇಶಿಸಿದ್ದೇವೆ” ಎಂದು ಅವರು ಹೇಳಿದ್ದಾರೆ. ಬಾಹುಬಲಿ ಚಿತ್ರದ ಮೊದಲ ವಾರದ ಕಲೆಕ್ಷನ್ ರೂ 1000 ಕೋಟಿಗೆ ಹತ್ತಿರದಲ್ಲಿದ್ದರೆ ಅದರಲ್ಲಿ ಬೆಂಗಳೂರಿನ ಪಾಲು ರೂ 300 ಕೋಟಿಯಷ್ಟಾಗಿದೆ.

40 ವರ್ಷಗಳ ನಂತರ bಪೌರಾಣಿಕ ಚಲನಚಿತ್ರ

`ಕುರುಕ್ಷೇತ್ರ’ ಚಿತ್ರ ಸೆಟ್ಟೇರಲು ಇನ್ನೆರಡು ತಿಂಗಳು ಬಾಕಿಯಿದೆ. ಇದು ಕನ್ನಡ ಚಿತ್ರರಂಗದಲ್ಲಿ 1977ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ  `ಬಬ್ರುವಾಹನ’ದ ನಂತರ  ಬರೋಬ್ಬರಿ 40 ವರ್ಷಗಳ ನಂತರ ಸೆಟ್ಟೇರಲಿರುವ ಪ್ರಥಮಪೌರಾಣಿಕ ಚಿತ್ರವಾಗಲಿದೆ.

ದುರ್ಯೋಧನನಾಗಿ ದರ್ಶನ್ : ಕನ್ನಡದ  ಚ್ಯಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾದ ದರ್ಶನ್ ಕುರುಕ್ಷೇತ್ರದಲ್ಲಿ ದುರ್ಯೋಧನನ ಪಾತ್ರ ನಿರ್ವಹಿಸಲಿದ್ದಾರೆ. ಇದು ಅವರ 50ನೇ ಚಿತ್ರವಾಗಲಿದೆ. ಅಂಬರೀಷ್ ಭೀಷ್ಮನ ಪಾತ್ರ ನಿರ್ವಹಿಸಲಿದ್ದರೆ ಯುದಿಷ್ಠಿರನಾಗಿ ವಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ.