ತಮ್ಮನ್ನು ಸಾಕಿ ಸಲಹಿದ 93 ವರ್ಷದ ದಾದಿಯ ಕಾಣಲು ಮಂಗಳೂರಿಗೆ ಬಂದ ಬಹ್ರೈನ್ ಸಚಿವ !

ದಾದಿಯೊಂದಿಗೆ ಬಹ್ರೈನ್ ಸಚಿವ ಖಾಲಿದ್

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವ್ಯಕಿಯೊಬ್ಬ ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ತನಗೆ ಸಹಾಯ ಮಾಡಿದವರನ್ನು, ತನ್ನನ್ನು ಆಡಿಸಿ ಬೆಳೆಸಿದವರನ್ನು ಮರೆಯಬಾರದು ಎಂಬ ಮಾತಿದೆ. ಆದರೆ ಉನ್ನತ ಹುದ್ದೆಗೇರಿದ ಕೂಡಲೇ ಹೆಚ್ಚಿನವರು ಎಲ್ಲವನ್ನೂ ಮರೆತುಬಿಡುವ ಸಂಭವವೇ ಅಧಿಕ. ಇದಕ್ಕೆ ಅಪವಾದವಾಗಿದ್ದಾರೆ ಬಹ್ರೈನಿನ ವಿದೇಶ ಸಚಿವರಾದ ಖಾಲಿದ್ ಬಿನ್ ಅಹ್ಮದ್ ಅಲ್ ಖಲೀಫಾ.

ಇವರು ಇತ್ತೀಚೆಗೆ ಮಂಗಳೂರಿಗೆ ಬಂದಿದ್ದರು. ಏನಾದರೂ ಅಧಿಕೃತ ಭೇಟಿಯಿರಬಹುದು ಎಂದು ತಿಳಿದುಕೊಂಡರೆ ಅದು ತಪ್ಪಾದೀತು. ಸಚಿವರು ಬಂದ ಕಾರಣ-ಅವರು ಚಿಕ್ಕವರಿರುವಾಗ ಅವರ ಲಾಲನೆ, ಪಾಲನೆ ಮಾಡಿ ಅವರನ್ನು ನೋಡಿಕೊಂಡಿದ್ದ ದಾದಿಯೊಬ್ಬರನ್ನು ಭೇಟಿಯಾಗಲು.

ಡಿಸೆಂಬರ್ 28ರಂದು ಸಚಿವರು ತಮ್ಮ ಇನಸ್ಟಾಗ್ರಾಂನಲ್ಲಿ ತಾವು ತಮ್ಮ ದಾದಿ, ಮಂಗಳೂರಿನ ಕಾರ್ಮಿನ್ ಮಥಾಯಸ್ (93) ಅವರೊಂದಿಗೆ ತೆಗೆಸಿಕೊಂಡಿರುವ ಛಾಯಾಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. “ಚಿಕ್ಕಂದಿನಿಂದ ನನ್ನನ್ನು ತಮ್ಮ ಮಗನಂತೆಯೇ ನೋಡಿಕೊಂಡ ನನ್ನ ನ್ಯಾನಿ. ಮಾಮಾ ಕಾರ್ಮಿನ್ ಮಥಾಯಸ್, ಕರ್ನಾಟಕ, ಮಂಗಳೂರಿನ ಆಕೆಯ ಮನೆಯಲ್ಲಿ…” ಎಂದು ಅವರು ಪೋಸ್ಟ್ ಮಾಡಿದ್ದರು.

“1959ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ಕಾರ್ಮಿನ್ ಬಹ್ರೈನ್ ದೇಶಕ್ಕೆ ತೆರಳಿ ಅಲ್ಲಿ ಈಗ ದಿವಂಗತರಾಗಿರುವ ನನ್ನ ಸಹೋದರ ಅಬ್ದಲ್ಲಾ, ನನ್ನನ್ನು ಹಾಗೂ ನನ್ನ ಇಬ್ಬರು ಕಿರಿಯ ಸಹೋದರಿಯರಾದ ಮಾಯಿ ಹಾಗೂ ಲುಲ್ವ ಅವರನ್ನು ಆಕೆ ಪ್ರೀತಿಯಿಂದ ಆರೈಕೆ ಮಾಡಿದ್ದರು. ಆಕೆಯೊಂದಿಗೆ ಕಳೆದ ಪ್ರತಿ ಕ್ಷಣವೂ ನಮಗೆ ಆನಂದದಾಯಕ. ದೇವರು ಆಕೆಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ” ಎಂದು ಬಹ್ರೈನ್ ಸಚಿವರು ಹೇಳಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ಬಹ್ರೈನ್ ಸಚಿವರು ಭಾರತಕ್ಕೆ ಖಾಸಗಿ ಭೇಟಿಯಲ್ಲಿದ್ದು, ಮಂಗಳೂರಿಗೆ ಬರುವ ಮೊದಲು ಕೇರಳದ ಕೊಲ್ಲಂ ಸಂದರ್ಶಿಸಿ 21 ವರ್ಷಗಳ ಕಾಲ ತಮ್ಮ ಮನೆಗೆಲಸ ಮಾಡಿಕೊಂಡಿದ್ದ ಲೈಲ ಅವರನ್ನೂ ಭೇಟಿಯಾದರು.