ಹಂದಿ ಮಾಂಸ ನಿಷೇಧ ಪ್ರಸ್ತಾಪ ತಿರಸ್ಕರಿಸಿದ ಬಹ್ರೈನ್ ಸರಕಾರ

ಬಹ್ರೈನ್ : ದೇಶದಲ್ಲಿ ಹಂದಿ ಮಾಂಸ ಆಮದು ಮತ್ತು ಮಾರಾಟಕ್ಕೆ ನಿರ್ಬಂಧ ಹೇರಬೇಕೆಂದು ಸಂಸತ್ ಮುಂದಿಟ್ಟ ಪ್ರಸ್ತಾವನೆಯನ್ನು ಮುಸ್ಲಿಂ ಬಹುಸಂಖ್ಯಾತರ ದೇಶವಾಗಿರುವ ಬಹ್ರೈನ್ ಸರಕಾರ ತಿರಸ್ಕರಿಸಿದೆ. ಸಂಸತ್ತಿನ ಈ ಪ್ರಸ್ತಾಪವು  ದೇಶದಲ್ಲಿ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದೊಡ್ಡ ಸಂಖ್ಯೆಯ ಮುಸ್ಲಿಮೇತರರ ಹಕ್ಕುಗಳನ್ನು ಕಸಿದಂತಾಗುವುದು ಎಂದು ಸರಕಾರ ಅಭಿಪ್ರಾಯ ಪಟ್ಟಿದೆ.

ಬಹ್ರೈನ್ ಆಮದು ಮಾಡುವ ಹಂದಿ ಮಾಂಸ ಸಹಿತ ಬೇರೆ ಎಲ್ಲಾ ಮಾಂಸಗಳ ಪರಿಶುದ್ಧತೆಯನ್ನು ಪರಿಶೀಲಿಸಲಾಗುತ್ತದೆ ಎಂದು ಸಂಸತ್ತಿಗೆ ನೀಡಿದ ತನ್ನ ಉತ್ತರದಲ್ಲಿ ಸರಕಾರ ಹೇಳಿದೆ.

ಈ ಹಿಂದೆ ಕೂಡ ಹಲವು ಜನಪ್ರತಿನಿಧಿಗಳು  ಹಂದಿ ಮಾಂಸ ಆಮದು ನಿಷೇಧಕ್ಕೆ ಪ್ರಯತ್ನಿಸಿರುವ ಹೊರತಾಗಿಯೂ ಸರಕಾರ ಈ ಬಗ್ಗೆ ದೃಢ ನಿಲುವು ತಳೆದಿದೆ.

2015ರಲ್ಲಿ ಸಂಸದ ಅಬ್ದುಲ್ಲಾ ಬಿನ್ ಹೊವೈಲ್ ಅವರು  ಹಂದಿ ಮಾಂಸದ ಆಮದು, ಮಾರಾಟ ಹಾಗೂ ಅವುಗಳನ್ನು ಹೊಂದುವುದಕ್ಕೆ ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದರು. ಹಂದಿ ಮಾಂಸ ವ್ಯವಹಾರ ನಡೆಸುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿರುವುದರಿಂದ ಮುಸ್ಲಿಮ್ ರಾಷ್ಟ್ರವಾಗಿರುವ ¨ಹ್ರೈನ್ ಶರೀಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಅವರು ವಾದಿಸಿದ್ದರು.

ಹಂದಿ ಮಾಂಸ ಮಾರಾಟವನ್ನು ಅಪರಾಧೀಕರಣಗೊಳಿಸುವ ಸಲುವಾಗಿ ಸಂಬಂಧಿತ ಕಾನೂನನ್ನು ತಿದ್ದುಪಡಿಗೊಳಿಸುವ ಪ್ರಸ್ತಾಪವನ್ನು  ಸಂಸತ್ತಿನ ಮೇಲ್ಮನೆ – ಶುರ ಕೌನ್ಸಿಲ್ -ತಿರಸ್ಕರಿಸಿದ ಮೂರು ತಿಂಗಳ ನಂತರ ಅಬ್ದುಲ್ಲಾ ತಮ್ಮ ಬೇಡಿಕೆಯಿರಿಸಿದ್ದರು.

ಹಂದಿ ಮಾಂಸಕ್ಕೆ ನಿಷೇಧ ಹೇರಿದ್ದೇ ಆದಲ್ಲಿ ಅದು ಮುಸ್ಲಿಮೇತರರ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದು ಎಂದು ಶುರ ಸದಸ್ಯರು ವಾದಿಸಿದ್ದರು.

ಬಹ್ರೈನ್ ದೇಶದಲ್ಲಿ ಸುಮಾರು ಆರು ಲಕ್ಷ ವಿದೇಶಿಯರಿದ್ದು ದೇಶದ ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆ ವಿದೇಶಿಯರದ್ದಾಗಿದೆ.