ಶಾಸಕರ, ಅಧಿಕಾರಿಗಳ ಅಸಹಕಾರದಿಂದ ಅರಣ್ಯ ಅತಿಕ್ರಮಣ ಅಕ್ರಮ-ಸಕ್ರಮ ಯೋಜನೆ ಹಳಿತಪ್ಪಿದೆ

ಬೆಂಗಳೂರು : ಬಗರ್ ಹುಕುಂ ಭೂಮಿಗಳನ್ನು ಸಕ್ರಮಗೊಳಿಸಲು ತಮಗೆ ತಾವೇ ವಿಧಿಸಿದ್ದ ಗಡುವನ್ನು ತಲುಪಲಾಗದೇ ಇರುವುದಕ್ಕೆ ಅಸಮಾಧಾನ ತೋಡಿಕೊಂಡಿರುವ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಎಲ್ಲಾ ಪಕ್ಷಗಳ ಶಾಸಕರುಗಳ ಹಾಗೂ ಅಧಿಕಾರಿಗಳ ಅಸಹಕಾರದಿಂದಲೇ ಇಡೀ ಯೋಜನೆ ಹಳಿ ತಪ್ಪಿದೆ ಎಂದು ದೂರಿದ್ದಾರೆ.
“ಈ ತಿಂಗಳ ಅಂತ್ಯದೊಳಗೆ ಬಗರ್ ಹುಕುಂ ಜಮೀನುಗಳನ್ನು ಸಕ್ರಮಗೊಳಿಸಬೇಕೆಂಬುದು ನನ್ನ ಮಹದಿಚ್ಛೆಯಾಗಿತ್ತು. ಆದರೆ ಇನ್ನು ನನ್ನಿಂದ ಈ ಗಡು ತಲುಪಲು ಸಾಧ್ಯವಿಲ್ಲ. ನನ್ನಂತಹ ರಾಜಕಾರಣಿಗಳ ಅಗತ್ಯ ರಾಜಕೀಯ ರಂಗಕ್ಕಿದೆಯೇ ಎಂದು ಯೋಚಿಸಬೇಕಾಗಿದೆ” ಎಂದು ಕಾಗೋಡು ಬೇಸರದಿಂದ ಹೇಳಿದ್ದಾರೆ.
“ಬಗರ್ ಹುಕುಂ ಜಾಗಗಳ ಸಕ್ರಮಕ್ಕಾಗಿ ಸಲ್ಲಿಕೆಯಾಗಿರುವ ಸÀುಮಾರು 4 ಲಕ್ಷ ಅರ್ಜಿಗಳು ಇನ್ನೂ ವಿಲೇವಾರಿಯಾಗಲು ಬಾಕಿಯಿವೆ ಹಾಗೂ ಶಾಸಕರ ಹಾಗೂ ಅಧಿಕಾರಿಗಳ ಗಮನ ಇತ್ತ ಅಗತ್ಯವಿದೆ” ಎಂದು ಕಾಗೋಡು ತಿಳಿಸಿದ್ದಾರೆ.
“ಶಾಸಕರುಗಳು ಎಂದಿನಂತೆ ವಿಳಂಬ ನೀತಿಯನ್ನನುಸರಿಸುತ್ತಿದ್ದರೆ, ಅವರ ಕೋಪಕ್ಕೆ ತುತ್ತಾಗುವ ಭಯದಿಂದ ತಹಸೀಲ್ದಾರರು ಈ ಬಾಕಿ ಅರ್ಜಿಗಳನ್ನು ಗಮನಿಸುತ್ತಿಲ್ಲ” ಎಂದು ಕಾಗೋಡು ತಿಳಿಸಿದ್ದಾರೆ.
ತಾನು ಸ್ಪೀಕರ್ ಆಗಿದ್ದಾಗ ತನ್ನ ಮಾತಿಗೆ ಎಲ್ಲರೂ ಬೆಲೆಕೊಡುತ್ತಿದ್ದರೆ ಈಗ ಸಚಿವನಾದ ಮೇಲೆ ಯಾವ ಶಾಸಕನೂ ತನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಾಗೋಡು ಅಲವತ್ತುಕೊಂಡರು. ಇದೇ ರೀತಿ ಮುಂದುವರಿದರೆ ತಹಸೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕಾದೀತು ಎಂದು ಕಾಗೋಡು ಎಚ್ಚರಿಸಿದ್ದಾರೆ.