15 ದಿನದಲ್ಲಿ ಬದಿಯಡ್ಕ ಗೂಡಂಗಡಿಗಳ ತೆರವು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬದಿಯಡ್ಕ ಪೇಟೆಯ ಗೂಡಂಗಡಿಗಳನ್ನು 15 ದಿನಗಳೊಳಗೆ ತೆರವುಗೊಳಿಸಲು ಗ್ರಾಮ ಪಂಚಾಯತ್ ಆಡಳಿತ ಸಮಿತಿ ನಿರ್ಧರಿಸಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕುಂಬಳೆ ರಸ್ತೆಯ ನವಜೀವನ ಜಂಕ್ಷನ್, ಪುತ್ತೂರು ರಸ್ತೆಯ ಕೆಡೆಂಜಿ ಜಂಕ್ಷನ್ ಮೇಲಿನ ಪೇಟೆಯ ಸರಕಾರಿ ಆಸ್ಪತ್ರೆ ಜಂಕ್ಷನುಗಳಲ್ಲಿ ಗೂಡಂಗಡಿಗಳು ಕಾರ್ಯಾ ಚರಿಸಕೂಡದೆಂದು ಪಂಚಾಯತ್ ಆಡಳಿತ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಗೂಡಂಗಡಿ ವ್ಯಾಪಾರಿಗಳ ಸಂಘಟನೆ ಪ್ರತಿನಿಧಿಗಳೊಂದಿಗೆ ಡಿಸೆಂಬರ್ 12ರಂದು ಚರ್ಚೆ ನಡೆಸುವುದಾಗಿ ಪಂಚಾಯತ್ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ತಿಳಿಸಿದ್ದಾರೆ.  ಆಡಳಿತ ಮಂಡಳಿ ಸಭೆಯಲ್ಲಿ ಕೆಲವು ವ್ಯಾಪಾರಿಗಳು ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.

ಆದರೆ ಆ ವಿಷಯದಲ್ಲಿ ಲೋಕೋಪಯೋಗಿ ಇಲಾಖೆ ಕ್ರಮಕೈಗೊಳ ಬೇಕಾಗಿದೆಯೆಂದು ಕಾರ್ಯದರ್ಶಿ ಸಭೆಯಲ್ಲಿ ತಿಳಿಸಿದ್ದಾರೆ.

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ದೂರಿನ ಹಿನ್ನೆಲೆಯಲ್ಲಿ ಗೂಡಂಗಡಿಗಳ ವಿರುದ್ಧ  ಕ್ರಮಕೈಗೊಳ್ಳಲಾಗಿದೆ. ಪೇಟೆಯಲ್ಲಿ ಹೋಟೆಲುಗಳೂ ಕಾರ್ಯಾಚರಿಸುತ್ತಿವೆಯೆಂದೂ ಕೆಲವು ಗೂಡಂಗಡಿಗಳು ಜೀನಸು ಅಂಗಡಿಗಳಾಗಿ ಮಾರ್ಪಾಡು ಗೊಂಡಿವೆಯೆಂಬ ಆರೋಪವಿದೆ. ಈ ದೂರುಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತು ಕಚೇರಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲೂ ಗೂಡಂಗಡಿಗಳ ತೆರವಿಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ಸಭೆಗೆ ಗೂಡಂಗಡಿ ವ್ಯಾಪಾರಿಗಳ ಸಂಘಟನೆ ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ.