ಬ್ರಾಹ್ಮಣರು ಅಸ್ಪøಶ್ಯತೆ ಬಿಟ್ಟರೂ ಹಿಂದುಳಿದವರು ಬಿಟ್ಟಿಲ್ಲ : ಬಂಜಗೆರೆ

ಮಂಗಳೂರು : ಕಾಲಕ್ಕೆ ತಕ್ಕಂತೆ ಬ್ರಾಹ್ಮಣರು ಅಸ್ಪೃಶ್ಯತೆ ಬಿಟ್ಟರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬ್ರಾಹ್ಮಣ ಸಮುದಾಯ ದೈಹಿಕ ಅಸ್ಪೃಶ್ಯತೆಯನ್ನು ಬಿಟ್ಟುಕೊಟ್ಟರೂ ಸಮಾಜದ ಇತರ ಹಿಂದುಳಿದ ವರ್ಗಗಳು ದಲಿತರ ವಿರುದ್ಧವಾದ ಅಸ್ಪೃಶ್ಯತೆಯನ್ನು ಇನ್ನು ಕೂಡ ಬಿಟ್ಟಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಆಯೋಜಿಸಿರುವ ಜನನುಡಿ-2016 ಸಾಹಿತ್ಯ ಸಮಾವೇಶದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನ ನಡೆದ `ಮುಸ್ಲಿಂ-ದಲಿತ-ಹಿಂದುಳಿದ ವರ್ಗಗಳ ಐಕ್ಯತೆ ಸವಾಲು’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

“ಹಿಂದುಳಿದ ಜಾತಿಗಳು ಇಂದಿಗೂ ಅಸ್ಫೃಷ್ಯತೆಯನ್ನು ಆಚರಿಸಿಕೊಂಡು ಬಂದಿದ್ದಾರೆ. ಅಸ್ಪಷ್ಯತೆಯು ಹಳ್ಳಿಗಳಲ್ಲಿ  ಜೀವಂತವಾಗಿದೆ. ನಗರಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ಅದೇ ಸಂದರ್ಭದಲ್ಲಿ ಹಿಂದುಳಿದ ವರ್ಗದವರು ಮೇಲ್ವರ್ಗದವರಿಂದ ಆದ ದಬ್ಬಾಳಿಕೆಯನ್ನು ಮರೆತಂತೆ ಕಾಣುತ್ತಿದ್ದು, ದಲಿತ ವರ್ಗದವರ ಬೆಳವಣಿಗೆ ಸಹಿಸಲು ಸಿದ್ಧರಾದಂತೆ ಕಾಣಿಸುತ್ತಿಲ್ಲ. ಹಿಂದುಳಿದವರು ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರು ಒಂದಾಗಬೇಕಾದ ಸಂದರ್ಭದಲ್ಲಿ ಇಂತಹ ವೈರುಧ್ಯಕ್ಕೆ ಅವಕಾಶ ನೀಡಬಾರದು” ಎಂದು ಬಂಜಗೆರೆ ಹೇಳಿದರು.

“ತನ್ನಲ್ಲೇ ಜೀತ ಮಾಡುತ್ತಿದ್ದ ವ್ಯಕ್ತಿ ತನ್ನ ಸರೀಕನಾಗಲು ಮಾಡುತ್ತಿರುವ ಪ್ರಯತ್ನ ಸಹಿಸಲು ಹಿಂದುಳಿದವರಿಗೆ ಆಗುತ್ತಿಲ್ಲ. ಅದು ಆಗಗೊಡಬಾರದು ಎಂದೇ ಪ್ರಯತ್ನ ನಡೆಸುತ್ತಿದೆ. ಇದನ್ನು ಹಿಂದುಳಿದ, ಅತೀ ಹಿಂದುಳಿದ ವರ್ಗಗಳು ಅರಿತುಕೊಳ್ಳಬೇಕಿದೆ” ಎಂದರು.

“ದಲಿತ ನಾಯಕರ ಆಕ್ರೋಶ ಯಾವಾಗಲೂ ತನ್ನ ಪ್ರದೇಶದ ಅದೇ ಸಮುದಾಯದ ಇನ್ನೊಬ್ಬ ಬಲಾಡ್ಯ ನಾಯಕನ ಮೇಲೆಯೇ ಇರುತ್ತದೆಯೇ ಹೊರತು ಬ್ರಾಹ್ಮಣಿಕೆಯ ಮೇಲೆ ಅಲ್ಲ. ಇದೇ ರೀತಿ ಚಿತ್ರದುರ್ಗದಲ್ಲಿ ಗೊಲ್ಲರು-ಮಾದಿಗರು ಸಂಘರ್ಷ ಮಾಡುತ್ತಿದ್ದರೆ, ಬಳ್ಳಾರಿಯಲ್ಲಿ ಗೊಲ್ಲರು-ಬೇಡರು ಗುದ್ದಾಡುತ್ತಾರೆ. ಕೆಲ ಊರುಗಳಲ್ಲಿ ಕುರುಬರು ಇರುತ್ತಾರೆ. ಏಕೆ ಹೀಗೆ ಎಂಬುದು ಗೊತ್ತಾಗಬೇಕು” ಎಂದರು.

ಐಕ್ಯತೆ ಎಂಬುದು ಅರಿವು. ಸಾವಿರಾರು ಸಮುದಾಯಗಳಿರುವ ಭಾರತದಲ್ಲಿ ಐಕ್ಯತೆ ಕಷ್ಟಸಾಧ್ಯ. ಸಾಂಸ್ಕøತಿಕ ಎಚ್ಚರ ಇಲ್ಲದಿದ್ದರೆ ಐಕ್ತತೆ ಸಾಧ್ಯವೇ ಇಲ್ಲ. ಸಮಾಜದ ಬೆಳವಣಿಗೆ, ವಿಕಾಸ ಕ್ರಮದ ಸಮಗ್ರ ಅರಿವಿದ್ದರೆ ಮಾತ್ರ ಸಾಧ್ಯ. ಸಮಾನತೆ ಅರಿವಿದ್ದಂತೆ, ಐಕ್ಯತೆಯೂ ಅರಿವೇ ಆಗಿದೆ. ಯಾರು ಹಿಂದು ಧರ್ಮದ ವಾರಸುದಾರರಲ್ಲವೋ ಅವರನ್ನು ನಾವು ಹಿಂದು ದರ್ಮದ ವಾರಸುದಾರರನ್ನಾಗಲು ಬಿಟ್ಟಿದ್ದೇವೆ. ದಲಿತರ ಕೋಪ ಕೇವಲ ಹಿಂದುಳಿದವರ ಮೇಲಿದೆಯೇ ಹೊರತು ಬ್ರಾಹ್ಮಣರ ಮೇಲಿಲ್ಲ ಎಂದರು.

ಸಂಘ ಪರಿಹಾರ 60 ವರ್ಷದಿಂದ ಹಿಂದುಳಿದವರ ನಡುವೆ ಕೆಲಸ ಮಾಡುತ್ತಾ ಮುಸ್ಲಿಮರನ್ನು ದೂರ ಮಾಡುತ್ತಿದೆ. ಆದರೆ ಅವರು ಹೇಳುವಂತೆ ಮುಸ್ಲಿಮರು ದೇಶದ್ರೋಹಿಗಳಲ್ಲ ಎಂದು ಹೇಳಲು ನಾವು ಎಷ್ಟರಮಟ್ಟಿಗೆ ಸಾಂಸ್ಕøತಿಕವಾಗಿ ಕೆಲಸ ಮಾಡುತ್ತಿದ್ದೇವೆ, ಮುಸ್ಲಿಂರ ಮೇಲೆ ಹಲ್ಲೆಗಳಾಗುತ್ತಿದ್ದ ಸಂದರ್ಭದಲ್ಲಿ ಹಿಂದುಳಿದ ಹಾಗೂ ದಲಿತರು ಅವರ ಜೊತೆ ತಡೆಗೋಡೆಗಳಾಗಿ ನಿಲ್ಲಬೇಕಾಗಿತ್ತು. ಅವರನ್ನು ರಕ್ಷಿಸಲು ಮುಂದಾಗಬೇಕಿತ್ತು ಎಂದರು.

ಮೀಸಲಾತಿಗೆ ವಿರೋಧವಾಗಿರುವ ಹಾಗೂ ಸಂವಿದಾನಕ್ಕೆ ವಿರುದ್ದವಾಗಿರುವವರ ಜೊತೆಗೆ ಕೈಜೊಡಿಸಿದರೆ ತಪ್ಪಾಗುವುದು ಎಂಬ ಅರಿವು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರಲ್ಲಿ ಇರಬೇಕಾಗುತ್ತದೆ.

ಮುಸ್ಲಿಂ ಸಮುದಾಯದ ಸಂಕಷ್ಟಗಳ ಪರಿಹಾರಕ್ಕೆ ಅದೇ ಸಮುದಾಯದಲ್ಲಿ ಅಂಬೇಡ್ಕರ್ ಅವರಂತಹ ನಾಯಕ ಬರಬೇಕಿದೆ ಎಂದು ವಿಷಯ ಮಂಡಿಸಿದ ಚಿಂತಕ ರಹಮತ್ ತರೀಕೆರೆ ಅವರು ಹೇಳಿದರು.

“ಅಹಿಂದ ರಾಜಕಾರಣದ ಆಚೆಗೂ ಸಹ ಯೋಚಿಸಬೇಕಿದೆ. ಕ್ರೈಸ್ತರೂ ಸೇರಿದಂತೆ ಎಲ್ಲರನ್ನೂ ಒಳಗೊಳ್ಳಬೇಕಿದೆ ಎಂದ ಅವರು, ಕಮ್ಯೂನಿಸ್ಟರಲ್ಲಿ ಮುಸ್ಲಿಮರಿಗೆ ಜಾಗ ಇಲ್ಲೇವೇ, ಅಥವಾ ಮುಸ್ಲಿಮರೇ ಹೋಗುತ್ತಿಲ್ಲವೇ? ದಲಿತ ಚಳವಳಿಗಳು ಏಕೆ ಮುಸ್ಲಿಮರನ್ನು ಒಳಗೊಳ್ಳುತ್ತಿಲ್ಲ ಎಂಬುದು ಚರ್ಚೆಯಾಗಬೇಕಿದೆ” ಎಂದರು.

“ಉಡುಪಿ ಚಲೋ ಕರ್ನಾಟಕದ ರಾಜಕಾರಣದಲ್ಲಿ ಸಂಸ್ಕೃತಿಯ ಬಹುದೊಡ್ಡ ಕೊಡುಗೆ ಎಂದ ಅವರು, ಚಳುವಳಿ ರಾಜಕಾರಣದಲ್ಲಿ ಒಂದು ಸುದೀರ್ಘ ದಾರಿ ಇದೆ. ಚಳುವಳಿ ರಾಜಕಾರಣವನ್ನು ಒಂದು ಬಹುದೊಡ್ಡ ಶಕ್ತಿಯನ್ನಾಗಿ ಮಾಡಬೇಕಾಗಿದೆ. ಹೊಸ ಚಳುವಳಿಗಳನ್ನು ಸಮುದಾಯಗಳಲ್ಲಿ ರೂಪಿಸಬೇಕಾಗಿದೆ ಹಾಗೂ ಈಗಿರುವ ಚಳುವಳಿಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ” ಎಂದರು.

1973ರಲ್ಲಿ ನಡೆದ ಬೂಸಾ ಪ್ರಕರಣ ಸ್ಮರಿಸಿದ ಪತ್ರಕರ್ತ ಶಿವಾಜಿ ಗಣೇಶನ್ ಅವರು ದಲಿತ ಸಂಘರ್ಷ ಸಮಿತಿಗೆ ಹುಟ್ಟಿಗೆ ಕಾರಣವಾದ ಘಟನೆಗಳನ್ನು ವಿಶ್ಲೇಷಿಸಿದರು.

ಪ್ರಗತಿಪರರು, ಎಡಪಂಥೀಯರೂ ಸಹ ದಲಿತರ ವಿರೋಧಿಗಳು ಎನಿಸಲು ಶುರುವಾಗಿದೆ. ಇದು ತುಂಬಾ ನೋವಿನ ಸಂಗತಿ ಎಂದರು. ಹೋರಾಟ ಮಾಡುವಾಗ ಶತ್ರುಗಳನ್ನು ಜಾಸ್ತಿ ಮಾಡಿಕೊಳ್ಳುವುದಲ್ಲ. ಮಿತ್ರರನ್ನು ಹೆಚ್ಚು ಹೊಂದಬೇಕು. ಇದರಲ್ಲಿ ಸಂಘಟನೆಗಳು ಸೋಲುತ್ತಿವೆ ಎಂದರು.

ಹಿಂದುಳಿದವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿಲ್ಲ  ಎಂದು ಲೇಖಕ ರಾಜಪ್ಪ ದಳವಾಯಿ ಹೇಳಿದರು.

ಸೈದ್ಧಾಂತಿಕ ಸ್ಪಷ್ಟತೆ ದಲಿತನಿಗೆ ಇರಬೇಕು. ಇದೇನು ದೇಶಕ್ಕೆ ಅಪಾಯಕಾರಿ ವಿಷಯವೇನಲ್ಲ. ಆದರೆ ಹಿಂದುಳಿದವರದು ಜಾಣ ನಿದ್ದೆ. ಯಾವುದೇ ಸಾಮಾಜಿಕ ಚಹರೆ ಇಲ್ಲದವರನ್ನು ಹಿಂದುಳಿದವರು ಎಂಬು ಅಂಬೇಡ್ಕರ್ ಹೇಳಿದ್ದರು. ಇವತ್ತಿಗೂ ಪರಿಸ್ಥಿತಿ ಬದಲಾಗಿಲ್ಲ ಎಂದರು.

ಅಹಿಂದಕ್ಕೆ ಸೈದ್ಧಾಂತಿಕ ಹಿನ್ನಲೆ ಇಲ್ಲ. ಇದು ಸಾಂದರ್ಭಿಕ ಓಯಸಿಸ್ ಅಷ್ಟೇ. ಸ್ವಾರ್ಥದ ಮೂಲಕ ಅಸಂಖ್ಯಾತ ಹಿಂದುಳಿದವರನ್ನು ಡಿಫೈನ್ ಮಾಡಲು ಆಗಲ್ಲ ಎಂದ ಅವರು, ಹಿಂದುಳಿದ ವರ್ಗವನ್ನು ಪ್ರಿಸರ್ವ್ ಮಾಡಿ ಇಡಲಾಗಿದೆ. ಇದರ ಹಿಂದೆ ಎಸ್ಟಾಬ್ಲಿಷ್ ಆಗುವ ತಂತ್ರ ಇದೆ ಎಂದರು.

ಗೋಷ್ಠಿಯನ್ನು ರಮಾನಂದ ಅಂಕೋಲ ನಿರ್ವಹಿಸಿದರು.