ಯುಪಿಸಿಎಲ್ ಬೆಂಬಲಿಸುವುದು ಮೂರ್ಖತನವಲ್ಲದೇ ಮತ್ತೇನು ?

ತನ್ನ ಹುಟ್ಟೂರಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತು ಬ್ರಹ್ಮಾವರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಶೀಲಾ ಕೆ ಶೆಟ್ಟಿಯವರೇ, ಕಳೆದ ನವೆಂಬರ್ 26, 2016ರಂದು ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಬೇಜವಾಬ್ದಾರಿ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲದೆ, ತಮಗೆ ದೇಶದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಖಂಡಿತಾ ಇಲ್ಲ. ನವೆಂಬರ್ 28ಕ್ಕೆ ಭಾರತ್ ಬಂದ್ ಬೆಂಬಲಿಸಿದರೆ ಅವರು ಮೂರ್ಖರು ಎಂಬರ್ಥದಲ್ಲಿ ಮಾತನಾಡುತ್ತಿದ್ದೀರಿ.

ಆದರೆ ನಿಮ್ಮಂಥ ರಾಜಕೀಯ ಬೇಳೆ ಬೇಯಿಸುವ ರಾಜಕಾರಣಿಗಳು ಬಂದ್ ಬೆಂಬಲಿಸುವವರನ್ನು ಮೂರ್ಖರು ಎಂದು ಹೇಳುವುದು ವಿಪರ್ಯಾಸ. ನೀವು ಎಂತಹ ರಾಜಕಾರಣಿ ಎನ್ನುವುದು ನವೆಂಬರ್ 10ರಂದು ಯುಪಿಸಿಎಲ್ ಅಹವಾಲು ಸಭೆಯಲ್ಲಿ ಸ್ಪಷ್ಟವಾಗಿದೆ. ದೇಶದ ಬಗ್ಗೆ ಚಿಂತಿಸುವ ನೀವು ಮೊನ್ನೆಯ ಸಭೆಯಲ್ಲಿ ಕಂಪೆನಿಯ  ಪರ ವಾದಿಸಿದ್ದೀರಿ. ನೀವು ಹುಟ್ಟಿ ಬೆಳೆದು ಬಂದ ಊರಿನ ಜನರು ಕಂಪೆನಿಯಿಂದಾಗಿ ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಮೈಕ್ ಹಿಡಿದುಕೊಂಡು ನೇರವಾಗಿ ಕಂಪೆನಿಯನ್ನು ಕೊಂಡಾಡಿದ್ದೀರಿ.

ಊರು ಉದ್ಧಾರವಾದರೆ ದೇಶೋದ್ಧಾರ ಎಂಬಂತೆ ಮೊದಲು ಕಂಪೆನಿಯ ಪರವಾಗಿ ವಾದಿಸುವುದನ್ನು ನಿಲ್ಲಿಸಿ ನಿಮ್ಮೂರಿನ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕಂಪೆನಿಯಿಂದ ಜನರಿಗಾಗುವ ಅನ್ಯಾಯವನ್ನು ಪ್ರತಿಭಟಿಸಲು ಮುಂದೆ ಬನ್ನಿ. ನವೆಂಬರ್ 10ರಂದು ಯುಪಿಸಿಎಲ್ ಕಂಪೆನಿಯವರು ಕರೆದ ಸಭೆಯನ್ನು ಕಂಪೆನಿಯಿಂದ ಕರೆತಂದ ಬಾಡಿಗೆ ಗೂಂಡಾಗಳ ಉಪಸ್ಥಿತಿಯಲ್ಲಿ ಕಂಪೆನಿಯನ್ನು ಹಾಡಿ ಕೊಂಡಾಡಿದ್ದು ಮೂರ್ಖತನದ ಪರಮಾವಧಿಯಲ್ಲದೆ ಇನ್ನೇನು ?

ಪ್ರಧಾನಿ ಮೋದಿಯ ಬಲಗೈ ಬಂಟನಾಗಿರುವ ಅದಾನಿಯವರು ಲ್ಯಾಂಕೋ ಕಂಪೆನಿಯನ್ನು ಖರೀದಿಸಿದ ಮೇಲೆ ಒಮ್ಮೆಲೆ ಕಂಪೆನಿಯನ್ನು ಪ್ರೋತ್ಸಾಹಿಸುತ್ತಿದ್ದೀರಲ್ಲಾ, ಇದರ ಅರ್ಥವೇನು ? ಅದಾನಿ ಖರೀದಿ ಮಾಡಿದ ನಂತರ ಏನೆಲ್ಲ ಹೊಸ ಮೆಷಿನರಿ ಉಪಯೋಗಿಸಿ ಸಮಸ್ಯೆ ನಿಯಂತ್ರಿಸಿದರು ಎಂದು ಜನರಿಗೆ ತಿಳಿಸುವಿರಾ ?

ಇನ್ನಾದರೂ ಕಂಪೆನಿ ಪರ ಹೇಳಿಕೆ ಕೊಡುವುದನ್ನು ಬಿಟ್ಟು ನಿಜ ಜನಪರ ಕಾಳಜಿ ತೋರಿಸಿ ಜನರ ಮನ ಗೆಲ್ಲಲು ಶ್ರಮಿಸಿ.

  • ಸಂತೋಷ್ ಸುವಡಿರ್ಣ, ಕಟಪಾ