ತನ್ನ ಜೀವನ ಚರಿತ್ರೆಯನ್ನು ಸ್ವತಃ ನಿಷೇಧಿಸಿದ ಬಾಬಾ ರಾಮದೇವ್

ಪ್ರಿಯಾಂಕ ಪಾಥಕ್-ನಾರಾಯಣ್ ಬರೆದಿರುವ ತಮ್ಮ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡುವ ಬದಲು ನ್ಯಾಯಾಲಯದ ಮೊರೆಹೋಗಿ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ತರುವ ಮೂಲಕ ಬಾಬಾ ರಾಂದೇವ್ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಪುಸ್ತಕವನ್ನು ಮುದ್ರಿಸುತ್ತಿರುವ ಜಗ್ಗರನಾಟ್ ಪ್ರಕಾಶಕರು ಈ ಕೃತಿಯನ್ನು ಬಿಡುಗಡೆ ಮಾಡದಂತೆ ದೆಹಲಿಯ ಕರ್ಕರಡೂಮಾ ನ್ಯಾಯಾಲಯ ಆದೇಶ ನೀಡಿದೆ.

`ದೇವಮಾನವನಿಂದ ಬೃಹತ್ ಉದ್ಯಮಿಯವರೆಗೆ ಬಾಬಾ ರಾಂದೇವ್ ಅವರ ಜೀವನ ಗಾಥೆ’ ಎಂಬ ಕೃತಿಯ ಬಿಡುಗಡೆಯನ್ನು ತಡೆಹಿಡಿಯಲಾಗಿದೆ. ಈ ಮೊಕದ್ದಮೆಯ ವಿಚಾರಣೆ ನಡೆಸಿದ ದೆಹಲಿಯ ನ್ಯಾಯಾಲಯ ಪ್ರಕಾಶಕ ಮತ್ತು ಕೃತಿಯ ಲೇಖಕರ ವಾದವನ್ನು ಆಲಿಸದೆಯೇ ತೀರ್ಪು ನೀಡಿದೆ. ಕಕ್ಷಿದಾರರ ವಿಚಾರಣೆಯಿಂದ ಅಂತಿಮ ತೀರ್ಪು ನೀಡುವುದು ವಿಳಂಬವಾಗುತ್ತದೆ ಎಂಬ ಕಾರಣಕ್ಕಾಗಿ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ. ಆದರೆ ಪ್ರಕಾಶಕರು ನ್ಯಾಯಾಲಯದ ತೀರ್ಪನ್ನು ವಿರೋಧಿಸಿದ್ದು, ತಾವು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಈ ಕೃತಿ ರಚಿಸಲು ಐವತ್ತಕ್ಕೂ ಹೆಚ್ಚು ಜನರೊಡನೆ ಸಂದರ್ಶನ ನಡೆಸಿದ್ದು, ಎಲ್ಲ ವಿವರಗಳನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಕಾಶಕರು ಹೇಳಿದ್ದಾರೆ. ನ್ಯಾಯಾಲಯದ ಮೊರೆಹೋಗಲು ಎಲ್ಲರಿಗೂ ಸಮಾನ ಹಕ್ಕು ಇರುತ್ತದೆ. ಆದರೆ ಅಂತಿಮ ನ್ಯಾಯ ನ್ಯಾಯಯುತವಾಗಿರಬೇಕು ಎಂದು ಹೇಳಿರುವ ಪ್ರಕಾಶಕರು ಮಾನನಷ್ಟ ವಿಚಾರವೇನಾದರೂ ಇದ್ದಲ್ಲಿ ಅದು ನ್ಯಾಯಾಲಯದಲ್ಲೇ ತೀರ್ಮಾನವಾಗಬೇಕು ಎಂದು ಹೇಳಿದ್ದಾರೆ.

ರಾಂದೇವ್ ಜೀವನಗಾಥೆಯನ್ನು ದಾಖಲಿಸುವ ಸಂದರ್ಭದಲ್ಲಿ ದೊರೆತ ಎಲ್ಲ ಸಂಪರ್ಕ ಮತ್ತು ಮಾಹಿತಿಗಳನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಹಲವು ವರ್ಷಗಳ ಪರಿಶ್ರಮದ ಈ ಕೃತಿಯ ನಿಷೇಧಕ್ಕೆ ಪ್ರಕಾಶಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾವು ರಾಂದೇವ್ ಪರ ಆಗಲಿ ವಿರೋಧ ಆಗಲೀ ಇಲ್ಲ ವಸ್ತುನಿಷ್ಠವಾಗಿ ಬರೆದಿದ್ದೇನೆ ಎಂದು ಲೇಖಕರು ಹೇಳಿದ್ದಾರೆ.