ಭೂಮಿ ಹಂಚಿದ ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿಗೆ ಸನ್ಮಾನ

ಬಂಟ್ವಾಳ : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಭೂಸುಧಾರಣಾ ಸಚಿವರಾಗಿದ್ದ, ತನ್ನ ಜಮೀನುಗಳನ್ನೇ ಗೇಣಿದಾರರಿಗೆ ಮೊದಲು ಹಂಚಿ ಉಳುವವನೇ ಹೊಲದೊಡೆಯ ಕಾನೂನು ಅನುಷ್ಠಾನಗೊಳಿಸಿದ ಬಿ ಸುಬ್ಬಯ್ಯ ಶೆಟ್ಟಿ ಅವರನ್ನು ಮಂಗಳವಾರ ಬಂಟ್ವಾಳದಲ್ಲಿ ಸನ್ಮಾನಿಸಲಾಯಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಅಧ್ಯಕ್ಷತೆಯಲ್ಲಿ ಸಚಿವರಾದ ರಮಾನಾಥ ರೈ, ಯು ಟಿ ಖಾದರ್, ಸಚೇತಕ ಐವನ್ ಡಿಸೋಜ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಶಕುತಂಳಾ ಶೆಟ್ಟಿ, ಶಾಸಕ ಜೆ ಆರ್ ಲೋಬೊ, ಮಾಜಿ ಸಚಿವ ಬಿ ಎಲ್ ಶಂಕರ್ ಸಮ್ಮುಖದಲ್ಲಿ ಅರಸು ಪ್ರಶಸ್ತಿ ವಿಜೇತ ಸುಬ್ಬಯ್ಯ ಶೆಟ್ಟಿ ಅವರನ್ನು ಸಕಲ ಗೌರವಾಧಾರಗಳೊಂದಿಗೆ ಸನ್ಮಾನಿಸಲಾಯಿತು.

ಇವರೊಂದಿಗೆ ಅರಸು ಪ್ರಶಸ್ತಿ ವಿಜೇತರಾದ ಮಾಜಿ ಸಚಿವ ಬಿ ಎ ಮೊಯ್ದೀನ್ ಮತ್ತು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರನ್ನು ಕೂಡ ಸನ್ಮಾನಿಸಲಾಯಿತು.

ಅಂದಿನ ಸುರತ್ಕಲ್ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ದೇವರಾಜ ಅರಸು ಸರಕಾರದಲ್ಲಿ ಭೂಸುಧಾರಣೆ, ಶಿಕ್ಷಣ, ವಾರ್ತಾ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿ ಅವರು ಮೊದಲಿಗೆ ಸಚಿವರಾದ ಅನಂತರ ತಮ್ಮೆಲ್ಲ ಜಮೀನುಗಳನ್ನು ಗೇಣಿದಾರರಿಗೆ ಹಂಚಿದರು. ಅನಂತರ ವಿಶಾಲವಾದ ಜಮೀನುಗಳನ್ನು ಹೊಂದಿದ್ದ ಜಮೀನ್ದಾರರು ತಮ್ಮ ಜಮೀನುಗಳನ್ನು ಗೇಣಿದಾರರಿಗೆ, ಹಿಂದುಳಿದ ವರ್ಗದವರಿಗೆ ಹಂಚಿಕೆಯಾಗುವಂತೆ ನೋಡಿಕೊಂಡಿದ್ದರು.

ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಜನ್ಮತಳೆಯಲು, ಮಂಗಳೂರು ಶಿಕ್ಷಣ ಸಂಸ್ಥೆಗಳ ಹಬ್ ಆಗಲು ಅಂದು ಶಿಕ್ಷಣ ಸಚಿವರಾಗಿದ್ದ ಬಿ ಸುಬ್ಬಯ್ಯ ಶೆಟ್ಟಿ ಅವರು ಕೈಗೊಂಡ ನೀತಿಗಳು ಕಾರಣವಾಗಿವೆ. ಸೋತುಹೋದ ದೇವರಾಜ ಅರಸು ಅವರನ್ನು ಎಲ್ಲರೂ ಕೈಬಿಟ್ಟರು ಶೆಟ್ಟರು ಕೈಬಿಡಲಿಲ್ಲ. ಶೆಟ್ಟರು ಸಚಿವ ಸ್ಥಾನ ಬಿಟ್ಟಾಗ ಬರಿಗೈಲಿ ಹೋದವರು ಬಾಡಿಗೆ ಮನೆಯಲ್ಲಿ ಹಲವು ವರ್ಷಗಳ ಕಾಲ ಜೀವನ ನಡೆಸಿದವರು. ಇಂದಿನ ಜನರಿಗೆ ಆದರ್ಶಪ್ರಾಯರಾದ ನಾಯಕ ಸುಬ್ಬಯ್ಯ ಶೆಟ್ಟಿ ಎಂದು ಅಭಿನಂದನಾ ಭಾಷಣ ಮಾಡಿದ ಸದಾನಂದ ಪೆರ್ಲ ಹೇಳಿದರು.

ರಾಜಕೀಯ ಮತ್ತು ಮಂಗಳೂರಿನಲ್ಲಿ ವಕೀಲ ವೃತ್ತಿ ಮಾಡುವ ಮುನ್ನ ಸುಬ್ಬಯ್ಯ ಶೆಟ್ಟಿ ಅವರು ಒಂಭತ್ತು ವರ್ಷಗಳ ಕಾಲ ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇಂಡೋ-ಚೀನಾ ಯುದ್ಧದ ಸಂದರ್ಭದಲ್ಲಿ ಅವರು ಟಿಬೇಟ್ ಪ್ರದೇಶಲ್ಲಿ ಕರ್ತವ್ಯ ನಿರತರಾಗಿದ್ದರು ಎಂದು ಪೆರ್ಲ ಹೇಳಿದರು. ಕಳೆದ ಕೆಲವು ವರ್ಷಗಳಿಂದ ಸುಬ್ಬಯ್ಯ ಶೆಟ್ಟಿ ಅವರು ರಾಜಕೀಯ ಸನ್ಯಾಸಿಯಾಗಿದ್ದಾರೆ.