ಮಂಗಳೂರಿಗೆ ಬರ್ತಿದ್ದಾರೆ ಮಾಜಿ ಕ್ರಿಕೆಟ್ ನಾಯಕ ಅಜರುದ್ಧೀನ್, ಆಗಲೇ ಬಂದ ಇರ್ಫಾನ್ ಪಠಾಣ್

ಮಂಗಳೂರು : ಅಲ್ ಮುಝೈನ್-ವೈಟ್ ಸ್ಟೋನ್-ಎಂಪಿಎಲ್ ಆವೃತ್ತಿಯ 20-20 ಕ್ರಿಕೆಟ್ ಪಂದ್ಯಾಟವನ್ನು ನವ ಮಂಗಳೂರು ಬಂದರು ಮಂಡಳಿಯ ಬಳಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಲಿದ್ದು ಡಿ 17ರಂದು ಇದರ ಉಧ್ಘಾಟನೆಯನ್ನು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಜರುದ್ಧೀನ್ ಅವರು ನೆರವೇರಿಸಲಿದ್ದಾರೆ.ಡಿ 17ರಂದು ಸಂಜೆ 4.30 ಗಂಟೆಗೆ ಉದ್ಘಾಟನೆ ನಡೆಯಲಿದೆ. ಹಸಿರು ಹುಲ್ಲಿನ ಅಸ್ಟ್ರೋಟಫ್ ಮೈದಾನದಲ್ಲಿ ಡಿ 17ರಿಂದ 30ರವೆಗೆ ಒಟ್ಟು 14 ದಿನಗಳ ಕಾಲ 12 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಲೀಗ್ ಹಂತದಲ್ಲಿ 30 ಪಂದ್ಯಗಳು, ನಂತರ ಎಲಿಮಿನೇಟರ್, ನಾಕೌಟ್ ಹಂತಗಳಲ್ಲಿ 5 ಪಂದ್ಯಗಳು ನಡೆಯಲಿದೆ. ಅಧಿಕೃತ ಪಂದ್ಯಗಳು ಡಿ 18ರಿಂದ ಪ್ರಾರಂಭವಾಗಲಿದೆ.

irfan

ಈ ಬಾರಿಯ ಪಂದ್ಯದಲ್ಲಿ ರೆಡ್ ಹಾಕ್ಸ್ ಕುಡ್ಲ, ಟೀಮ್ ಎಲಿಗೆಂಟ್ ಮೂಡುಬಿದಿರೆ, ಕಂಕನಾಡಿ ನೈಟ್ ರೈಡರ್ಸ್, ಕರಾವಳಿ ವಾರಿಯರ್ಸ್ ಪಣಂಬೂರು, ಕಾರ್ಕಳ ಗ್ಲೇಡಿಯೇಟರ್ಸ್, ಪ್ರೆಸಿಡೆಂಟ್ಸ್ ಸಿಕ್ಸರ್ಸ್ ಕುಂದಾಪುರ, ಮೇಸ್ಟ್ರೋ ಟೈಟಾನ್ಸ್, ಸ್ಪಾರ್ಕ್ ಎವೆಂಜರ್ಸ್ ಬೊಳಾರ, ಕೋಸ್ಟಲ್ ಡೈಜೆಸ್ಟ್, ಸುರತ್ಕಲ್ ಸ್ಟ್ರೈಕರ್ಸ್, ಯುನೈಟೆಡ್ ಉಳ್ಳಾಲ, ಉಡುಪಿ ಟೈಗರ್ಸ್ ಭಾಗವಹಿಸಲಿವೆ. ಐಪಿಲ್ ಆಟಗಾರರಾದ ಕೆ ಸಿ ಕಾರ್ಯಪ್ಪ, ಶಿವಿಲ್ ಕೌಶಿಕ್, ಬಿ ಅಖಿಲೇಶ್, ಅಪ್ಪಣ್ಣ ಮತ್ತು 38 ಮಂದಿ ಕೆಪಿಎಲ್ ಆಟಗಾರರು ವಿವಿಧ ತಂಡಗಳಲ್ಲಿ ಸೇರಿ ಆಡಲಿದ್ದಾರೆ.

ಡಿ 17ರಂದು ಸಂಜೆ 4.30 ಗಂಟೆಗೆ ಅರ್ಜುನ್ ಕಾಫಿಕಾಡ್ ನೇತೃತ್ವದ ಚಲನಚಿತ್ರ ತಾರೆಯರ ತಂಡ ಹಾಗೂ ಎಂಪಿಎಲ್ ಆಯೋಜಕರ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಲೇಸರ್ ಶೋ, ಟಾಲ್ ಮೆನ್, ಸುಡುಮದ್ದು ಪ್ರದರ್ಶನ, ರಶಿಯನ್ ಅಗ್ನಿ ನೃತ್ಯ, ಡ್ರಾಗ್ಯನ್ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ಮಂಗಳೂರು ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ  ಸಿರಾಜುದ್ಧೀನ್ ತಿಳಿಸಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕೃತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಠಾಣ್ ನಗರದಲ್ಲಿ

 ಭಾರತೀಯ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಭಾನುವಾರ ನಗರಕ್ಕೆ ಆಗಮಿಸಿ ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟಿನ ಆಟಗಾರರಿಗೆ ಶುಭ ಹಾರೈಸಿದರು.ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಗರದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕೆ ಆಯೋಜಿಸಲಾಗಿರುವ ಈ ಎಂಪಿಎಲ್ ಕ್ರೀಡಾಕೂಟವನ್ನು ಕಂಡು ತುಂಬಾ ಹರ್ಷವಾಗಿದೆ ಎಂದರು.