30 ವರ್ಷಗಳ ಬಳಿಕ ಅಹಮದಾಬಾದಿನ ಈ ಮಸೀದಿಯಲ್ಲಿ ಕೇಳಿ ಬಂತು ಬಾಂಗ್

ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಮಸೀದಿ

ಅಹಮದಾಬಾದ್ : ಇಲ್ಲಿನ ಕಲುಪುರ್ ಪ್ರದೇಶದಲ್ಲಿ 30 ವರ್ಷಗಳ ಹಿಂದೆ  ಭುಗಿಲೆದ್ದ ಕೋಮು ಕಲಹದ ನಂತರ ಸ್ಥಳೀಯ ಮುಸ್ಲಿಂ ನಿವಾಸಿಗಳು ಹಿಂದೂ ಬಾಹುಳ್ಯ ಪ್ರದೇಶದಲ್ಲಿರುವ ತಮ್ಮ ಮಸೀದಿಯಿಂದ ದೂರವುಳಿಯಲಾರಂಭಿಸಿದ್ದರು. ಡಿಸೆಂಬರ್ 1993ರಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಯ ಬಳಿಕ ಅವರು ಈ ಮಸೀದಿಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದರು.

ಸುಮಾರು ಒಂದು ಶತಮಾನದ ಇತಿಹಾಸವಿರುವ ಈ ಮಸೀದಿಯು ಮೂರು ಹಿಂದೂ ದೇವಳಗಳ ಹತ್ತಿರದಲ್ಲಿದೆ. ಅದರ ಉಪಯೋಗ ನಿಂತಂದಿನಿಂದ ಮಸೀದಿಯ ಕಟ್ಟಡದ ಪರಿಸ್ಥಿತಿ ಹೇಳುವಂತಿರಲಿಲ್ಲ. ಎಲ್ಲೆಡೆ ಕುರುಚಲು ಗಿಡಗಳು ಬೆಳೆದು ಬಿಟ್ಟಿದ್ದವು. ಆದರೆ ಮಾರ್ಚ್ 2016ರಲ್ಲಿ  ಮೂರು ದಶಕಗಳಲ್ಲಿ ಮೊದಲ ಬಾರಿಗೆ ಈ ಮಸೀದಿಯಿಂದ ಪ್ರಾರ್ಥನೆಯ ಕರೆ – ಆಝಾನ್ – ಕೇಳಿ ಬಂದು ಎಲ್ಲರನ್ನೂ ಪುಳಕಿತಗೊಳಿಸಿತು.

2002ರಲ್ಲಿ ಈ ಪ್ರದೇಶದಲ್ಲಿ ಮತ್ತೆ ಮರುಕಳಿಸಿದ ಮತೀಯ ದಂಗೆಗಳ ನಂತರ ಇಲ್ಲಿ ಸಾಮರಸ್ಯದ ವಾತಾವರಣ ಮೂಡಿತ್ತು. ಈ ಮಸೀದಿಯ ಅಕ್ಕಪಕ್ಕದ ನಿವಾಸಿಗಳು  ಜತೆ ಸೇರಿ ಅದನ್ನು ಉಳಿಸಲು ಮುಂದೆ ಬಂದರು. ಹಿಂದೂಗಳಲ್ಲದೆ ಇತರ ಧರ್ಮಗಳ ಜನರೂ ಜತೆಗೂಡಿದರು. ಮಸೀದಿಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು ಹಾಗೂ ಅದರ ನವೀಕರಣಕ್ಕಾಗಿ ದೇಣಿಗೆಗಳನ್ನೂ ಉದಾರ ಹೃದಯದ ಜನರು ನೀಡಿದರು.  ಈ ಒಂದು ಪ್ರಯತ್ನ ಎರಡೂ ಸಮುದಾಯಗಳ ನಡುವಿನ ಜನರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತಲ್ಲದೆ ಸ್ಥಳದಲ್ಲಿ ಶಾಂತಿ ನೆಲೆಸಲೂ ಸಹಕಾರಿಯಾಯಿತು.

ಈ ಮಸೀದಿಯ ಕೀಲಿಕೈಗಳ ಒಂದು ಗೊಂಚಲನ್ನು ಹತ್ತಿರದಲ್ಲಿಯೇ ಹೂ ಮಾರಾಟ ಮಾಡುವ ಪೂನಮ್ ಪಾರೇಖ್ ಮತ್ತು ಕೌಶಿಕ್ ರಮಿ ಅವರಿಗೆ ನೀಡಲಾಗಿದೆ. ಈ ಮಸೀದಿ ನವೀಕರಣಗೊಂಡಂದಿನಿಂದ ಬೇರೊಂದು ಮಸೀದಿಗೆ ನಮಾಜ್ ಸಲ್ಲಿಸಲು ಹೋಗುವ ಬದಲು ಸ್ಥಳೀಯರು ಇಲ್ಲಿಗೇ ಬರುತ್ತಿದ್ದಾರೆ.

ಈಗ ಈ ಪ್ರದೇಶದಲ್ಲಿ ಶಾಂತಿ, ಸಾಮರಸ್ಯ ನೆಲೆಸಿದೆ. ಮಸೀದಿಯೊಂದು  ಹಿಂದೂ-ಮುಸ್ಲಿಂ ಬಾಂಧವರನ್ನು ಒಂದಾಗಿಸಿದ ಅಪರೂಪದ ಪ್ರಸಂಗವಿದು.