ಅಯ್ಯಪ್ಪ ಗುರುಸ್ವಾಮಿಗಳೇ, ತಾವು ಕಾವಿವಸ್ತ್ರಕ್ಕೆ ಕೊಡುವ ಗೌರವ ಇಷ್ಟೇನಾ ?

ಶಬರಿಮಲೆಗೆ ಹೋಗಲು ಬಯಸುವ ಮಾಲಾಧಾರಿಗಳಿಗೆ ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರವನ್ನು ಧರಿಸಲು ನಿಯಮ ಮತ್ತು ಪರಿಪಾಠವಿದೆ. ಆದರೆ ಕೆಲವು ಗುರುಸ್ವಾಮಿಗಳು ಕಾವಿ ವಸ್ತ್ರವನ್ನು ಧರಿಸಿ, ತಾವೇ ಶ್ರೇಷ್ಠರೆಂದು ಮೆರೆಯುತ್ತಾರೆ. ಇದು ದುರಂತ ಹಾಗೂ ವಿಷಾದನೀಯ ಸಂಗತಿ.

ಇಂದಿನ ಕೆಲವು ಗುರುಸ್ವಾಮಿಗಳು (ಎಲ್ಲರೂ ಅಲ್ಲ) ಕಾವಿ ವಸ್ತ್ರವನ್ನು ಧರಿಸಿ, ಮಾಲೆಯನ್ನು ಧಾರಣೆ ಮಾಡಿ, ಇರುಮುಡಿ ಕಟ್ಟುವ ಮೂಲಕ, ನಾಡಿನ ಹಲವಾರು ಶ್ರೇಷ್ಠ ಪೂಜ್ಯ ಸ್ವಾಮೀಜಿಯವರ ಜೊತೆಯಲ್ಲಿ  ವೇದಿಕೆಯಲ್ಲಿ ಅವರೊಂದಿಗೆ ಸಮನಾಗಿ ಕುಳಿತು, ಭಕ್ತರಿಗೆ ನೀತಿಯ ಪಾಠವನ್ನು ಬೋಧಿಸುತ್ತಾರೆ. ಆದರೆ ಪವಿತ್ರವಾದ ಕಾವಿಯನ್ನು ಮುಟ್ಟಲೂ ಅನರ್ಹರಾದ ಇವರು ಶಬರಿಮಲೆ ಯಾತ್ರೆ ಮುಗಿದ ನಂತರ ಅಂದರೆ ಸಂಕ್ರಾಂತಿ ಬಳಿಕ ವಾಪಸ್ ಬಂದು, ಕಾವಿಯನ್ನು ತ್ಯಜಿಸಿ, ತಮ್ಮ ಮಾಮೂಲಿ ವಸ್ತ್ರವನ್ನು ಧರಿಸಿ, ತಮ್ಮ ಮಾಮೂಲಿ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಇದರಿಂದ ಅಮೂಲ್ಯವಾದ `ಕಾವಿ’ ವಸ್ತ್ರಕ್ಕೆ ನಾವಾಗಿ  ನಾವು ಅಪಚಾರ ಮಾಡಿದಂತಾಗುವುದಿಲ್ಲವೇ ?

ಆದ್ದರಿಂದ ನನ್ನದೊಂದು ಕಳಕಳಿಯ ಮನವಿ ಏನೆಂದರೆ, ಯಾವುದೇ ಗುರುಸ್ವಾಮಿಗಳಾಗಲಿ, ಕನ್ನಿ ಸ್ವಾಮಿಗಳಾಗಲಿ, ಎಂತಹ ಪರಿಸ್ಥಿತಿ ಬಂದರೂ ಸಹ, ಕಾವಿ ವಸ್ತ್ರವನ್ನು ಮಾತ್ರ ಧರಿಸದೆ, ಅದಕ್ಕೆ ಪವಿತ್ರವಾದ ಗೌರವವನ್ನು ಕೊಟ್ಟು ಮಾಮೂಲಿ ಕಪ್ಪು ಅಥವಾ ನೀಲಿವಸ್ತ್ರವನ್ನು ಧರಿಸಿ ತಮ್ಮ ಅಯ್ಯಪ್ಪ ವೃತ ನಿಯಮಗಳನ್ನು ಪಾಲಿಸಲಿ.

  • ಎಂ ಅವಿನಾಶ್, ಅಶೋಕನಗರ-ಮಂಗಳೂರು