ಅಯ್ಯಪ್ಪ ಮಾಲಾಧಾರಿ ಸ್ಪಾಟ್ ಡೆತ್

ಪಿಕಪ್-ಬೈಕ್ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಪಿಕಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು (ಅಯ್ಯಪ್ಪ ಮಾಲಾಧಾರಿ) ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಕ್ಕಡ ಗ್ರಾಮದ ಉಪ್ಪಾರಪಲಿಕೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮೃತ ಸವಾರನನ್ನು ವಿಟ್ಲ ಸನಿಹದ ಕಟ್ಟೆ ಎಂಬಲ್ಲಿನ ನಿವಾಸಿ ವೀರಪ್ಪ ಮೂಲ್ಯ ಎಂಬವರ ಕಿರಿಯ ಮಗ, ಫೋಟೋಗ್ರಾಫರ್ ಧನಂಜಯ ಮೂಲ್ಯ (34) ಎಂದು ಗುರುತಿಸಲಾಗಿದೆ.

ಗೋಳಿತೊಟ್ಟಿನಿಂದ ಮಾವನ ಮನೆಯಾದ ಅರಶಿನಮಕ್ಕಿ ಪಡ್ಡಾಯಿಬೆಟ್ಟು ಎಂಬಲ್ಲಿಗೆ ಬೈಕಲ್ಲಿ ಬರುತ್ತಿದ್ದ ಅಯ್ಯಪ್ಪ ಮಾಲಾಧಾರಿ ಧನಂಜಯಗೆ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.

ಇವರು ಮುಂದಿನ ಸೋಮವಾರದಂದು ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದು, ಯಾತ್ರೆಯ ಪೂರ್ವ ಸಿದ್ಧತೆಯಲ್ಲಿ ತಮ್ಮ ಮೂಲ ಕುಟುಂಬದ ಮನೆಯಾದ ಅರಸಿನಮಕ್ಕಿಗೆ ಹೋಗಿ ದೇವರುಗಳಿಗೆ ಕೈಮುಗಿದು ಪತ್ನಿ ಮತ್ತು ಮನೆಯವರಿಗೂ, ಸಂಬಂಧಿಕರಿಗೂ ಸೋಮವಾರದಂದು ಇರುಮುಡಿ ಕಟ್ಟುವ ಪೂಜೆಗೆ ಆಮಂತ್ರಿಸಲೆಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ವಿಟ್ಲದಿಂದ ಹೊರಟಿದ್ದರು. ಸುಮಾರು 7 ಗಂಟೆ ಹೊತ್ತಿಗೆ ದಾರಿ ಮಧ್ಯೆ ಗೋಳಿತೊಟ್ಟು ಹಾಗೂ ಕೊಕ್ಕಡ ಸಮೀಪದ ಉಪ್ಪಾರಪಳಿಕೆಯಲ್ಲಿ ಬೈಕಿಗೆ ಪಿಕಪ್ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿದೆ. ಬೈಕ್ ಸವಾರ ಧನಂಜಯ ಹೆಲ್ಮೆಟ್ ಧರಿಸಿದ್ದರೂ ಅಪಘಾತದ ರಭಸಕ್ಕೆ ಹೆಲ್ಮೆಟ್ ಸಂಪೂರ್ಣ ಪುಡಿಪುಡಿಯಾಗಿದ್ದು ತಲೆ ಒಡೆದಿತ್ತು.

ವೃತ್ತಿಯಲ್ಲಿ ಛಾಯಾಗ್ರಾಹಕರಾಗಿ ವಿಟ್ಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಧನಂಜಯ ಬಿಡುವಿನ ವೇಳೆಯಲ್ಲಿ ಸಹೋದರನ ಮೊಬೈಲ್ ಅಂಗಡಿಯನ್ನೂ ನೋಡಿಕೊಳ್ಳುತ್ತಿದ್ದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.