`ಮನಃಶಾಂತಿ ಸಂಪಾದನೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನಃಶಾಂತಿ ಮರುಗಳಿಕೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳು ಸಹಾಯಕಾರಿ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಅವರು ತಲಪಾಡಿ ದೇವಿನಗರದಲ್ಲಿ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ನಿರ್ಮಿಸಲಿರುವ ಶಾರದಾ ಆಯುರ್‍ಧಾಮ ಕಟ್ಟಡದ ಗುದ್ದಲಿ ಪೂಜೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

“ಇಂದಿನ ದಿನಗಳಲ್ಲಿ ಅಧಿಕ ಒತ್ತಡದಿಂದಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಮಾನಸಿಕ ಆರೋಗ್ಯ ಅಭಿವೃದ್ದಿ ಹೊಂದಿದರೆ ದೈಹಿಕ ಆರೋಗ್ಯ ಪ್ರಗತಿಯಾಗುತ್ತದೆ. ಇವೆರಡನ್ನೂ ಸಾಧಿಸಲು ಯೋಗ ಮತ್ತು ಧ್ಯಾನ ಉತ್ತಮವಾದ ಮಾರ್ಗ” ಎಂದು ಅವರು ಹೇಳಿದ್ದಾರೆ.

“ಯೋಗಾಭ್ಯಾಸ ಮಾಡಿದರೆ 60 ವರ್ಷ ದಾಟಿದರೂ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದ ಸಮಸ್ಯೆ ಬಾಧಿಸಲಾರದು. ಜೀವನದಲ್ಲಿ ಶಿಸ್ತು ಬೆಳೆಸಲು ಯೋಗ ಸಹಕಾರಿ” ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್, “ಜನರಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ. ಇಂದಿನ ದಿನಗಳಲ್ಲಿ ಔಷಧಿ ಮತ್ತು ಆರೋಗ್ಯ ರಕ್ಷಣೆ ವಿಧಾನ ಬದಲಾಗುತ್ತಾ ಇದೆ. ಹೆಚ್ಚಿನ ಜನರು ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಗೆ ಮನ್ನಣೆ ನೀಡುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆ ಆರೋಗ್ಯ ಸಾಮಥ್ರ್ಯ ಹೆಚ್ಚಿಸಲು ನೆರವಾಗುತ್ತದೆ. ಈ ಪ್ರದೇಶದಲ್ಲಿ ಆಯುರ್ವೇದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ” ಎಂದು ಹೇಳಿದರು.

ಪಾಲಿಮಾರ್ ಮಠದ ಸ್ವಾಮೀಜಿ ವಿದ್ಯಾಧೀಶ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ  ವಿದ್ಯಾಪ್ರಸಾದನ ತೀರ್ಥ ಸ್ವಾಮೀಜಿ ಆಯುರ್‍ಧಾಮ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದರು.

ಶಿರ್ಸಿ ಶಾಸಕ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಂಎಲ್ಸಿ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ  ಸಚೇತಕ ಗಣೇಶ್ ಕಾರ್ಣಿಕ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ಜಿಲ್ಲಾ ಆಯುಷ್ ಅಧಿಕಾರಿ ಡಾ ಮಹಮ್ಮದ್ ಇಕ್ಬಾಲ್, ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ ಬಿ ಪುರಾಣಿಕ್, ಉಪಾಧ್ಯಕ್ಷ ಕೆ ಎಸ್ ಕಲ್ಲೂರಾಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಮತ್ತು ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಸುಭಾಶ್ಚಂದ್ರ ಪುರಾಣಿಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.