ನಗದುರಹಿತ ವ್ಯವಸ್ಥೆ : ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ

ಅಂಗಡಿಯವರಿಗೆ ನಗದುರಹಿತ ವ್ಯವಸ್ಥೆಯ ಮಾಹಿತಿ ನೀಡುತ್ತಿರುವ ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ನಗದುರಹಿತ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತಿರುವಂತೆಯೇ ಉಜಿರೆ ಕಾಲೇಜಿನ ವಿದ್ಯಾರ್ಥಿಗಳು ಮೋದಿ ನಡೆಯನ್ನು ಬೆಂಬಲಿಸಿದ್ದು, ಡಿಜಿಟಲ್ ಇಂಡಿಯಾದ ಮತ್ತು ಕ್ಯಾಶ್ಲೆಸ್ ವ್ಯವಸ್ಥೆಯನ್ನು ಜನಜಾಗೃತಿ ಮೂಲಕ ವ್ಯಾಪಕವಾಗಿ ಪರಿಚಯಿಸಲು ಮುಂದಾಗಿದ್ದಾರೆ.

ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ವಿದ್ಯಾರ್ಥಿಗಳು ನಗರದ ಪ್ರತೀ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳಿಗೆ ತೆರಳಿ ಅಂಗಡಿ ಮಾಲಕರಿಗೆ ನಗದುರಹಿತ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ ಅಂಗಡಿಗಳಲ್ಲಿ ಗ್ರಾಹಕರಿಗೆ ಅನುಕೂಲಕರವಾಗುವಂತೆ ಸ್ವೈಪಿಂಗ್ ಮಷಿನ್ ಅಳವಡಿಸುವಂತೆ ಕೋರಿಕೊಂಡರು. ಕಾಲೇಜಿನ ಆಡಳಿತ ಮಂಡಳಿಯ ಸಹಕಾರದೊಂದಿಗೆ ಈ ಜಾಗೃತಿಯನ್ನು ವಿದ್ಯಾರ್ಥಿಗಳು ಮೂಡಿಸಿದರು.

ಈ ಅಭಿಯಾನದಲ್ಲಿ 76 ಮಂದಿ ತರಬೇತಿ ಪಡೆದ ವಿದ್ಯಾರ್ಥಿಗಳು, 700 ಮಂದಿ ಕಾರ್ಯಕರ್ತರು, 21 ಮಂದಿ ಅಧ್ಯಾಪಕರು ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಅಂಗಡಿ ಮಾಲಕರನ್ನು ವಿದ್ಯಾರ್ಥಿಗಳು ಸಂಪರ್ಕಿಸಿದ್ದರು. ನಗದುರಹಿತ ವ್ಯವಸ್ಥೆಯ ಬಗ್ಗೆ ಅರಿವಿರದ ಸಾರ್ವಜನಿಕರು, ಅಂಗಡಿ ಮಾಲಕರು, ವ್ಯವಹಾರ ಸಂಸ್ಥೆಗಳ ಮುಖ್ಯಸ್ಥರಿಗೆ ಈ ಅಭಿಯಾನ ನಗದುರಹಿತ ವ್ಯವಸ್ಥೆ ಕುರಿತಾಗಿ ತಿಳಿದುಕೊಳ್ಳಲು ಹೆಚ್ಚು ಅನುಕೂಲಕರವಾಯಿತು.