ಚಿತ್ರಕಲೆ ಮೂಲಕ ಎತ್ತಿನಹೊಳೆ ಯೋಜನೆ ವಿರುದ್ಧ ಜನಜಾಗೃತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಸಕ್ತ ಮುಂದುವರಿದಿರುವ ಎತ್ತಿನಹೊಳೆ ಯೋಜನೆ ತಡೆಗಟ್ಟುವ ನಿಟ್ಟಿನಲ್ಲಿ ಇದುವರೆಗೆ ನಡೆಸಿರುವ ಪ್ರಯತ್ನಗಳೆಲ್ಲ ವಿಫಲವಾಗಿದ್ದರೂ, ಇದೀಗ ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿ ಮಾನಸ್ವಿ ಸ್ವರೂಪ್ ತನ್ನ ಚಿತ್ರಕಲೆ ಮೂಲಕ ಸರ್ಕಾರದ ಗಮನಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಎಪ್ರಿಲ್ 8 ಮತ್ತು 9ರಂದು ಕದ್ರಿ ಪಾರ್ಕಿನಲ್ಲಿ ಮಾನಸ್ವಿಯ ಎರಡು ದಿನಗಳ `ಜಲಂತರಂಗ’ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ. ಈ ಮೂಲಕ ಈಕೆ ಜಲ ಮೂಲಗಳ ರಕ್ಷಣೆಯ ಅಗತ್ಯ ಹಾಗೂ ಯೋಜನೆಯಿಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳ ಗಮನಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಮಾನಸ್ವಿ, `ಸ್ವರೂಪ ಅಧ್ಯಯನ ಕೇಂದ್ರ’ದಲ್ಲಿ ಅನೌಪಚಾರಿಕ ಶಿಕ್ಷಣ ಪಡೆದಿದ್ದಾಳೆ. ಈಕೆ ಈ ಕೇಂದ್ರದಲ್ಲಿ ನಿರ್ದೇಶಕ ಗೋಪಾಡ್ಕರ್ ನಿರ್ದೇಶನದಲ್ಲಿ ಕಲೆ, ಮಿಮಿಕ್ರಿ ಮೊದಲಾದ ವ್ಯಕ್ತಿತ್ವ ವಿಕಸನ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾಳೆ. ಪ್ರಕೃತಿ ಮೇಲೆ ಅಪಾರವಾದ ಪ್ರೀತಿ ಬೆಳೆಸಿಕೊಂಡಿರುವ ಈಕೆ, ಸರ್ಕಾರದ ವಿವಿಧ ಯೋಜನೆಗಳಿಂದಾಗಿ ಪ್ರಕೃತಿ ನಾಶವನ್ನು ಹತ್ತಿರದಿಂದ ಗಮನಿಸಿದ್ದಾಳೆ.

ಪರಿಸರ ರಕ್ಷಣೆಯ ಅಗತ್ಯವಿದೆ ಎನ್ನುವ ಈಕೆ ತನ್ನ ಎರಡು ದಿನಗಳ ಚಿತ್ರಕಲಾ ಪ್ರದರ್ಶನದ ಮೂಲಕ ಎತ್ತಿನಹೊಳೆ ಯೋಜನೆಯು ಪ್ರಕೃತಿ ಮೇಲೆ ನಡೆಸಬಹುದಾದ ಅತ್ಯಾಚಾರದ ಬಗ್ಗೆ ಪ್ರದರ್ಶಿಸುತ್ತಿದ್ದಾಳೆ.

“ಸರ್ಕಾರವು ಎತ್ತಿನಹೊಳೆ ಸಹಿತ ಹಲವು ಪರಿಸರ ನಾಶಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ.

ಇಂತಹ ಮಾರಕ ಯೋಜನೆಗಳಿಂದ ವಿಶ್ವದ ಎಲ್ಲ ಜೀವಜಂತುಗಳಿಗೆ ಹಾನಿಯುಂಟಾಗಲಿದೆ. ಕಾರಣ, ನಾನು ಚಿತ್ರಕಲೆಯ ಮೂಲಕ ಪರಿಸರ ನಾಶಿ ಯೋಜನೆಗಳನ್ನು ಸಾದರಪಡಿಸಲು ಇಚ್ಚಿಸಿದ್ದೇನೆ. ನದಿಯು ನಮ್ಮ ತಾಯಿಗೆ ಸಮಾನ. ಆದರೆ ನಾವು ಈ ಸತ್ಯ ಮರೆಯುತ್ತಿದ್ದೇವೆ” ಎಂದು ಮಾನಸ್ವಿ ವಿವರಿಸಿದ್ದಾಳೆ.