ರಿಕ್ಷಾಕ್ಕೆ ಆಕರ್ಷಿತರಾದ ಆಸ್ಟ್ರೇಲಿಯನ್ನರು


ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಭಾರತಕ್ಕೆ ಆಗಮಿಸಿದ ಅಸ್ಟ್ರೇಲಿಯನ್ನರ ತಂಡವೊಂದು ಹಲವು ರಿಕ್ಷಾಗಳಲ್ಲಿ ಅವರೇ ಚಲಾಯಿಸಿಕೊಂಡು ಸುತ್ತಾಡುತ್ತಿರುವ ದೃಶ್ಯ ಮಂಜೇಶ್ವರದಲ್ಲಿ ಕಂಡುಬಂತು.

ಆಟೋದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕಾಗಿದ್ದ ಆಸ್ಟ್ರೇಲಿಯನ್ ಪ್ರಜೆಗಳು ದಾರಿ ತಪ್ಪಿ ಮಂಜೇಶ್ವರದ ಒಳ ರಸ್ತೆಯಲ್ಲಿ ಸಾಗುತ್ತಾ ಊರವರನ್ನು ಕಂಡು ಮಾತನಾಡಿಸುತ್ತಾ, ಹಲವು ವಿಷಯಗಳ ಬಗ್ಗೆ ಆಂಗ್ಲ ಭಾಷೆ ಗೊತ್ತಿರುವವರಲ್ಲಿ ಮಾಹಿತಿ ಪಡೆಯುತ್ತಾ, ಸುಡು ಬಿಸಿಲಿನಲ್ಲಿ ನೋಡುಗರನ್ನು ಆಕರ್ಷಿಸುವ ರೀತಿಯಲ್ಲಿ ಸಾಗಿದರು.

ತಿಂಗಳುಗಳ ಹಿಂದೆ ಆಸ್ಟ್ರೇಲಿಯದಿಂದ ಸೌತ್ ಆಫ್ರಿಕಾ ತೆರಳಿ ಬಳಿಕ ಭಾರತಕ್ಕೆ ಬಂದು ರಾಜಸ್ಥಾನದಿಂದ ಇದೀಗ ನೇರವಾಗಿ ಕೇರಳ ಪ್ರವೇಶಿಸಿ ರಿಕ್ಷಾದಲ್ಲೇ ಕೊಚ್ಚಿ ತನಕ ಸಾಗಲಿರುವುದಾಗಿ ಅಸ್ಟ್ರೇಲಿಯನ್ ಪ್ರಜೆಗಳಲ್ಲಿ ಒಬ್ಬರಾದ ಆಂತೋನಿ ಮಂಜೇಶ್ವರದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಭಾರತೀಯರ ಭಾಷೆ ನಮಗೆ ಅರ್ಥವಾಗದಿದ್ದರೂ ಅರ್ಥೈಸುವ ರೀತಿಯಲ್ಲಿ ನಮಗೆ ಎಲ್ಲಾ ಕಡೆಗಳಲ್ಲೂ ಭಾರತೀಯರು ಸಹಕಾರಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು. ಆಟೋ ಚಲಾಯಿಸುವುದರಲ್ಲಿ ಅತಿಯಾದ ಸಂತೋಷ ವ್ಯಕ್ತಪಡಿಸಿದ ಆಂತೋನಿ ಕೆಲ ಸಮಯ ಆಟೋ ಚಲಾಯಿಸಿಕೊಂಡು ಕೇರಳದಲ್ಲೇ ಇರುವುದಾಗಿ ತಿಳಿಸಿದ್ದಾರೆ.

LEAVE A REPLY