ಆಟೋರಿಕ್ಷಾಗಳಲ್ಲಿ ಜಿಪಿಎಸ್ ಅಳವಡಿಸಿಕೊಳ್ಳಲು ನಿರ್ಧಾರ

ಮಂಗಳೂರು: ನಗರದಲ್ಲಿ ಓಡಾಡುವ ಆಟೋರಿಕ್ಷಾಗಳಿಗೆ ಅಧಿಕೃತ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ಜಿಪಿಎಸ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕುಡ್ಲ ಸೌಹಾರ್ದ ಸಹಕಾರಿ ನಿರ್ದೇಶಕ ಮತ್ತು ಆಟೋರಿಕ್ಷಾ ಸಂಘಟನೆಗಳ ಮುಖಂಡ ಅಶೋಕ್ ಶೆಟ್ಟಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಜಿಪಿಎಸ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಆಟೋ ಚಾಲಕರ ನಡುವೆ ವಿವಾದ, ಮಾತಿನ ಚಕಮಕಿ ನಡೆಯುವ ಸಾಧ್ಯತೆ ಇದೆ. ಹೀಗಿದ್ದರೂ ಮಾಹಿತಿ ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಂಡು ಚಾಲಕರೂ ಮೇಲ್ದರ್ಜೆಗೇರಬೇಕಾಗಿದೆ. ಜಿಪಿಎಸ್ ಅಳವಡಿಸುವ ಸಂಬಂಧ ಸಾರಿಗೆ ಪ್ರಾದೇಶಿಕ ಪ್ರಾಧಿಕಾರದಿಂದ ಈಗಾಗಲೇ ಅನುಮತಿಯನ್ನೂ ಪಡೆದುಕೊಳ್ಳಲಾಗಿದೆ” ಎಂದು ಹೇಳಿದರು.“ಜಿಪಿಎಸ್ ಅಳವಡಿಸುವುದರಿಂದ ಪ್ರಯಾಣಿಕರಿಗೆ ಸುರಕ್ಷತೆ ಸಿಗಲಿದ್ದು, ಚಾಲಕರಿಗೂ ಇದು ಹೆಚ್ಚು ಅನುಕೂಲಕರವಾಗಿದೆ. ಅಲ್ಲದೆ ಈ ಮೂಲಕ ಜಾಹೀರಾತನ್ನು ಕೂಡಾ ಪ್ರದರ್ಶಿಸುವುದರಿಂದ ಚಾಲಕರು ಹೆಚ್ಚುವರಿಯಾಗಿ ಪ್ರತೀ ತಿಂಗಳು 1500 ರೂ ಆದಾಯವನ್ನು ಪಡೆದುಕೊಳ್ಳಲಿದ್ದಾರೆ” ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 200 ಆಟೋರಿಕ್ಷಾಗಳಷ್ಟೇ ಜಿಪಿಎಸ್ ಅಳವಡಿಸಲಿದ್ದು, ಸುಮಾರು 500 ಆಟೋರಿಕ್ಷಾಗಳಿಗೆ ಇದನ್ನು ಅಳವಡಿಸಬೇಕಾಗಿದೆ ಎಂದರು. ಅತ್ಯಾಧುನಿಕ ತಂತ್ರಜ್ಞಾನದ ಇಸ್ರೋ ಮಾದರಿಯಲ್ಲಿ ನಿರ್ಮಿಸಲಾದ ನಾವಿಕ್ ಹೆಸರಿನ ಜಿಪಿಎಸ್ ಇದಾಗಿದೆ. ಜಿಪಿಎಸ್ ಅಳವಡಿಕೆ ಕುರಿತಂತೆ ಚಾಲಕರಿಗೆ ಮಾಹಿತಿ ನೀಡಲು ಇಂದು ಬೆಳಿಗ್ಗೆ 10.30ಕ್ಕೆ ಪೊಲೀಸ್ ಲೇನ್‍ನ ನಾಸಿಕ್ ಬಂಗೇರ ಭವನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ