ರಿಕ್ಷಾಗೆ ಬಸ್ಸು ಡಿಕ್ಕಿ : ಚಾಲಕ ಸಾವು, 6 ಮಂದಿ ಗಂಭೀರ

ನಮ್ಮ ಪ್ರತಿನಿಧಿ ವರದಿ

ಮೂಲ್ಕಿ : ಇಲ್ಲಿಗೆ ಸಮೀಪದ ಹಳೆಯಂಗಡಿ ಬೊಳ್ಳೂರು ಜಂಕ್ಷನ್ ಬಳಿ ಬಸ್ಸೊಂದು ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಎದುರಿನಿಂದ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ  ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರೆ ಉಳಿದಂತೆ ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳ ಸಮೇತ 6 ಮಂದಿ ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ರಿಕ್ಷಾ ಚಾಲಕನನ್ನು ಹಳೆಯಂಗಡಿ ಇಂದಿರಾನಗರ ನಿವಾಸಿ ಸಾಧಿಕ್ (35) ಎಂದು ಗುರುತಿಸಲಾಗಿದೆ.

ಪಕ್ಷಿಕೆರೆ ಸಮೀಪದ ಪಂಜ ಉಲ್ಯ ನಿವಾಸಿಗಳಾದ ರೀತಾ (32), ಉಮಾವತಿ (37), ಕಸ್ತೂರಿ ಪೂಜಾರಿ (34), ರೇಣುಕ (28) ಮತ್ತು ಸಣ್ಣ ಮಗು ದಿಶಾನ್ (2), ವೈಭವ್ (8) ಎಂಬವರು ತೋಕೂರಿನಲ್ಲಿ ಷಷ್ಠಿ ಕಾರ್ಯಕ್ರಮಕ್ಕೆ ಭಾಗವಹಿಸಲೆಂದು ಪಂಜದ ಉಲ್ಯದಿಂದ ಹೊಟು ಬೊಳ್ಳೂರು ಜಂಕ್ಷನ್ ತಲುಪುತ್ತಿದ್ದಂತೆ ಹಳೆಯಂಗಡಿಯಿಂದ ಕಿನ್ನಿಗೋಳಿ ಕಡೆಗೆ ಅತೀ ವೇಗದಿಂದ ವಾಹನವೊಂದನ್ನು ಓವರ್‍ಟೇಕ್ ಮಾಡಿಕೊಂಡು ಬಂದು ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದ ಸಂದರ್ಭ ರಿಕ್ಷಾ ಪಲ್ಟಿಯಾಗಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರು ಒಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದಾಗ ಸ್ಥಳೀಯರು ಸೇರಿ ಎಲ್ಲರನ್ನು ಹೊರತೆಗೆದಿದ್ದಾರೆ. ಈ ಸಂದರ್ಭ ಚಾಲಕ ಹಳೆಯಂಗಡಿ ಇಂದಿರನಗರ ನಿವಾಸಿ ಸಾಧಿಕ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಬಸ್ಸು ಚಾಲಕನ ನಿಲ್ರ್ಯಕ್ಷ ಚಾಲನೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಪಘಾತದಿಂದ ಗ್ರಾಮೀಣ ಭಾಗದ ಬೊಳ್ಳೂರು ಜನತೆ ದಿಘ್ರಮೆಗೊಂಡಿದ್ದಾರೆ.