ಭಾರತದಲ್ಲಿ ಶೇ 69 ಉದ್ಯೋಗ ಕಡಿತಗೊಳಿಸಿದ ಯಾಂತ್ರೀಕರಣ

ವಿಶ್ವ ಬ್ಯಾಂಕ್ ವರದಿ

ನವದೆಹಲಿ : ವಿವಿಧ ಕ್ಷೇತ್ರಗಳಲ್ಲಿ ಯಾಂತ್ರೀಕರಣದಿಂದಾಗಿ ಭಾರತದಲ್ಲಿ ಶೇ 69ರಷ್ಟು ಉದ್ಯೋಗಗಳು ಕಡಿತಗೊಳ್ಳಲಿದ್ದರೆ, ಚೀನಾದಲ್ಲಿ ಕಡಿತಗೊಳ್ಳಲಿರುವ ಉದ್ಯೋಗಗಳ ಪ್ರಮಾಣ ಶೇ 77 ಆಗಲಿದೆಯೆಂದು ವಿಶ್ವ ಬ್ಯಾಂಕ್ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ. ಅಭಿವೃದ್ಧಿಗೊಳ್ಳುತ್ತಿರವ ದೇಶಗಳಲ್ಲಿ ಸಾಂಪ್ರದಾಯಿಕ ಆರ್ಥಿಕ ಹಾದಿಗಳಿಗೆ ತಂತ್ರಜ್ಞಾನ ತೊಂದರೆಯುಂಟು ಮಾಡಲಿದೆಯೆಂದೂ ವಿಶ್ವ ಬ್ಯಾಂಕ್ ಹೇಳಿದೆ.

“ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನಾವು ಮೂಲಸೌಕರ್ಯಾಭಿವೃದ್ಧಿಗಾಗಿ ಹೆಚ್ಚು  ಬಂಡವಾಳ ಹೂಡಿಕೆಗೆ ಆದ್ಯತೆ ನೀಡಿದಂತೆಯೇ, ಭವಿಷ್ಯದ ಆರ್ಥಿಕತೆಯಲ್ಲಿ ದೇಶಗಳಿಗೆ ಯಾವ ರೀತಿಯ ಮೂಲಸೌಕರ್ಯಗಳು ಅಗತ್ಯವಿದೆಯೆಂಬುದರ ಬಗ್ಗೆಯೂ ನಾವು ಯೋಚಿಸಬೇಕಿದೆ.  ತಂತ್ರಜ್ಞಾನ  ಈಗಾಗಲೇ ವಿಶ್ವದ ಸ್ವರೂಪವನ್ನೇ  ಬದಲಾಯಿಸಿದೆ ಹಾಗೂ ಮುಂದೆಯೂ ಬದಲಾಯಿಸಲಿದೆ” ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಕಿಮ್ ಹೇಳಿದ್ದಾರೆ.

“ಇಥಿಯೋಪಿಯಾದಲ್ಲಿ ಯಾಂತ್ರೀಕರಣದಿಂದ ಭವಿಷ್ಯದಲ್ಲಿ ಶೇ 85ರಷ್ಟು ಉದ್ಯೋಗಗಳು ಕಡಿತಗೊಳ್ಳಲಿವೆ” ಎಂದು ವಿವರಿಸಿದ ಅವರು, ಹೀಗಿರುವಾಗ ಮುಂದಿನ ಆರ್ಥಿಕ ಪ್ರಗತಿಯ ಕುರಿತಾಗಿ  ದೇಶಗಳು ಯಾವ ಹಾದಿಯನ್ನು ಅನುಸರಿಸಬೇಕು ಎಂದೂ ಯೋಚಿಸಬೇಕಿದೆ” ಎಂದು ಕಿಮ್ ತಿಳಿಸಿದ್ದಾರೆ.

“ಒಂದು ಮಗು ನೀತಿ ಕೆಲವು ದೇಶಗಳಲ್ಲಿ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ಅಪೌಷ್ಠಿಕತೆಯನ್ನು ಕಡಿಮೆಗೊಳಿಸಿದೆ” ಎಂದು ಹೇಳಿದ ಅವರು ಭಾರತದಲ್ಲಿ ಶೇ 38.7 ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದು, ದೇಶದ ಭವಿಷ್ಯದ ಸುಮಾರು ಶೇ 40 ಕೆಲಸ ಮಾಡುವ ಕೈಗಳು ಆಧುನಿಕ ಡಿಜಿಟಲ್ ಆರ್ಥಿಕತೆಂiÀiಲ್ಲಿ ಇತರರೊಂದಿಗೆ  ಸ್ಪರ್ಧಿಸಲು ಅಸಮರ್ಥರಾಗಿರುತ್ತಾರೆಂದು ಇದರ ಅರ್ಥ ; ಅತ್ತ ಚೀನಾದಲ್ಲಿ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಕಡಿಮೆ” ಎಂದರು.

“ಭಾರತದಲ್ಲಿ ಬಯಲು ಶೌಚಾಲಯ ಪದ್ಧತಿಯನ್ನು ಈಗಲೂ ಹಲವೆಡೆ ಅನುಸರಿಸುತ್ತಿರುವುದರಿಂದ ಮಕ್ಕಳು ಆಗಾಗ ವಾಂತಿಬೇಧಿಗೆ ಒಳಗಾಗುತ್ತಾರೆ. ಇಂತಹ ದೇಶಗಳ ನಾಯಕರಿಗೆ ಇಂತಹ ಸಮಸ್ಯೆಗಳು ತುರ್ತು ಪರಿಸ್ಥಿತಿಗೆ ಸಮ. ಅವುಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದು ನಾನು ಸದಾ ಹೇಳುತ್ತಿರುತ್ತೇನೆ” ಎಂದು ಕಿಮ್ ವಿವರಿಸಿದ್ದಾರೆ.