ಆರ್ಟಿಎ ಸಮ್ಮತಿಯ ನಿರೀಕ್ಷೆಯಲ್ಲಿ ಆಟೋರಿಕ್ಷಾ ಜಿಪಿಎಸ್ ಅಳವಡಿಕೆ, ಜಾಹೀರಾತು ಪ್ರದರ್ಶನ ಚಿಂತನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ರಿಕ್ಷಾಗಳಿಗೆ ಜಿಪಿಎಸ್ ಅಳವಡಿಕೆ ಮತ್ತು ರಿಕ್ಷಾ ಜಾಹೀರಾತು ಪ್ರದರ್ಶನ ಯೋಜನೆಯು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿಯ ನಿರೀಕ್ಷೆಯಲ್ಲಿದೆ.

ಒಂದು ವೇಳೆ ರಿಕ್ಷಾಗಳಲ್ಲಿ ಜಿಪಿಎಸ್ ಅಳವಡಿಸಿದರೆ, ರಿಕ್ಷಾ ಚಾಲಕರಿಂದಲೇ ರಚಿತವಾಗಿರುವ ಕುಡ್ಲ ಸೌಹಾರ್ದ ಸಹಕಾರಿ ಸೊಸೈಟಿಯು ನಗರದಾದ್ಯಂತ ರಿಕ್ಷಾ ಕಾಲ್ ಸೆಂಟರುಗಳನ್ನು ಅಸ್ಥಿತ್ವಕ್ಕೆ ತರಲಿದೆ. ಕಾಲ್ ಸೆಂಟರುಗಳ ಮೂಲಕ ನಗರದೊಳಗಿನ ಪ್ರಯಾಣಿಕರು ಕರೆ ಮಾಡಿ ರಿಕ್ಷಾವನ್ನು ಕರೆಸಿಕೊಳ್ಳಬಹುದು.

“ಸೌಹಾರ್ದ ಸಹಕಾರಿ ಸಂಘದಲ್ಲಿ ಸುಮಾರು 800ಕ್ಕೂ ಅಧಿಕ ಸದಸ್ಯರಿದ್ದಾರೆ. ಸೊಸೈಟಿಯ ನಿಯಮಗಳಿಗೆ ವಿಧೇಯರಾಗಿರುವ ನಗರದ ಯಾವುದೇ ರಿಕ್ಷಾಗಳ ಚಾಲಕರು ಅಥವಾ ಮಾಲಕರಿಗೆ ಜಿಪಿಎಸ್ ಸೌಲಭ್ಯ ಒದಗಿಸಲು ಸಂಘ ಮುಂದಾಗಿದೆ” ಎಂದು ಮಹಾ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಹೇಳಿದ್ದಾರೆ.

“ಬೆಂಗಳೂರು ಮೂಲದ ಟೆಲಿಮ್ಯಾಟಿಕ್ಸ್ 4ಯು ಅಟೋ ಕಮ್ಯುನಿಟಿ ಎಂಪವರ್ಮೆಂಟ್ ಯೋಜನೆಯಡಿಯಲ್ಲಿ ಜಿಪಿಎಸ್ ಒದಗಿಸಲಿದೆ. ರಿಕ್ಷಾ ಚಾಲಕರು ಅಥವಾ ಮಾಲಕರು ಆದಾಯ ಹೆಚ್ಚಳವನ್ನು ಜಾಹೀರಾತು ಪ್ರದರ್ಶನಗಳ ಮೂಲಕ ಗಳಿಸಿಕೊಳ್ಳಬಹುದಾಗಿದೆ. ವಾಹನ ಚಾಲಕರು ಅಥವಾ ಮಾಲಕರು ತಿಂಗಳಿಗೆ ರೂ 1,500ರಿಂದ ಆರಂಭಿಸಿ ನಿರಂತರ ಆದಾಯ ಗಳಿಸಬಹುದು. ಇದೇ ವೇಳೆ ನಗರದ ಹಲವಾರು ಆಟೋ ಚಾಲಕರು ಇದರಲ್ಲಿ ಆಸಕ್ತಿ ತೋರಿಸಿದ್ದರೆ, ಕೆಲವು ಚಾಲಕರು ಈಗಾಗಲೇ ಜಾಹೀತರಾತು ಪ್ರದರ್ಶನ ಪ್ರಾರಂಭಿಸಿದ್ದಾರೆ” ಎಂದು ಕೊಂಚಾಡಿ ತಿಳಿಸಿದ್ದಾರೆ.