ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆನ್ಲೈನ್ ಟ್ಯಾಕ್ಸಿ ಖಂಡಿಸಿ ರಿಕ್ಷಾ ಚಾಲಕರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಉಬೇರ್ ಆನ್ಲೈನ್ ಟ್ಯಾಕ್ಸಿ ಚಾಲಕರಿಗೆ ಅನುಮತಿ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿ ರಿಕ್ಷಾ ಚಾಲಕರು ಕರ್ನಾಟಕ ರಕ್ಷಣಾ ವೇದಿಕೆ ಘಟಕದಡಿ ಪ್ರತಿಭಟನೆ ನಡೆಸಿದರು. ಮಂಗಳವಾರ ಸಂಜೆ ಸಿಬ್ಬಂದಿ ಉಬೇರ್ ವಾಹನ ಚಾಲಕರ ಚಿಕ್ಕ ಗೂಡಂಗಡಿಯಂತಹ ಬುಕ್ಕಿಂಗ್ಸೆಂಟರ್ ತಂದಿಟ್ಟರು. ಇದನ್ನು ನೋಡುತ್ತಿದ್ದಂತೆ ರಿಕ್ಷಾ ಚಾಲಕರು ಕೆರಳಿದರು. ಇದನ್ನು ಇಲ್ಲಿಂದ ತೆರವುಗೊಳಿಸುವಂತೆ ಪಟ್ಟು ಹಿಡಿದರು. ಅಲ್ಲದೆ ಉಬೇರ್ ಸಂಸ್ಥೆಗೆ ಸೇರಿದ ವಾಹನಗಳಿಗೆ ಸಂಚರಿಸಲು ಇಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಪ್ರಸ್ತುತ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ರಿಕ್ಷಾ ಚಾಲಕರಿಗೆ ಪ್ರತ್ಯೇಕ ಪ್ರೀಪೇಯ್ಡ್ ಕೌಂಟರ್ ನೀಡಲಾಗಿದ್ದು, ಇಲ್ಲಿಂದ ಎಲ್ಲಾ ಪ್ರಯಾಣಿಕರನ್ನೂ ಸುಸೂತ್ರವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ ಇಂದು ಏಕಾಏಕಿಯಾಗಿ ಉಬೇರ್ ಕಂಪೆನಿ ಚಾಲಕರು ಇಲ್ಲಿ ಬುಕ್ಕಿಂಗ್ ಕಚೇರಿಯನ್ನು ತಂದಿಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದರೆ, “ನಮಗೆ ದಕ್ಷಿಣ ರೈಲ್ವೇಯ ಪಾಲ್ಘಾಟ್ ವಿಭಾಗದಿಂದ ಅನುಮತಿ ಸಿಕ್ಕಿದ್ದು, ರೈಲ್ವೇ ವಿಭಾಗವೇ ಅನುಮತಿ ನೀಡಿದೆ ಎಂದು ಹೇಳಿದ್ದಾರೆ” ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅರುಣ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ಸ್ಪಷ್ಟ ಉತ್ತರವಿಲ್ಲ. ನಮಗೆ ಪಾಲ್ಗಾಟ್ ಡಿವಿಜನ್ನಿನಿಂದ ಅನುಮತಿ ಸಿಕ್ಕಿದೆ. ಇದು ಸಂಸದರ ಎಲ್ಲಾ ಸಚಿವರು, ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಪರವಾನಿಗೆ ನೀಡಲಾಗಿದೆ ಎಂಬ ಸಿದ್ಧ ಉತ್ತರವನ್ನು ಡೆಪ್ಯುಟಿ ಸ್ಟೇಶನ್ ಮ್ಯಾನೇಜರ್ ಕಿಶನ್ ಕುಮಾರ್ ನೀಡಿದ್ದಾರೆ. ಆದರೆ ಈ ಬಗ್ಗೆ ಎಲ್ಲಿ ನೀಡಿದ್ದಾರೆ ಎಂದಾಗ ಸ್ಪಷ್ಟ ಉತ್ತರ ಇಲ್ಲದೇ ಅವರು ನುಣುಚಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ದೇಶದ ಇನ್ಯಾವ ರಾಜ್ಯಕ್ಕೂ ಈ ಸೇವೆ ಅಳವಡಿಸದ, ಅನುಮತಿ ನೀಡದ ಈ ವ್ಯವಸ್ಥೆಯನ್ನು ಮಂಗಳೂರಿನಲ್ಲಿ ಜಾರಿಗೊಳಿಸುವ ಅಗತ್ಯವಾದರೂ ಏನು ಎಂದು ರಿಕ್ಷಾ ಚಾಲಕರು ಕೇಳಿದರು. ಸಂಸದರು ಈ ವಿಚಾರದಲ್ಲಿ ಚಾಲಕರಿಗೆ ವಂಚನೆ ಮಾಡಿದ್ದಾರೆ ಎಂದೂ ಬಹಿರಂಗವಾಗಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಬಂದರು ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರುಣ್, “ಇದೀಗ ಕೃಷ್ಣ ಜನ್ಮಾಷ್ಟಮಿ ಹಬ್ಬ ಇರುವ ಕಾರಣ ಜನರಿಗೆ ತೊಂದರೆ ಆಗಬಾರದೆಂದು ನಾವು ಯಾವುದೇ ಪ್ರತಿಭಟನೆ ನಡೆಸುತ್ತಿಲ್ಲ. ಆದರೆ ಸೋಮವಾರ ನಮ್ಮ ವೇದಿಕೆ ಲಾಲಭಾಗಿನ ಓಲಾ ಮತ್ತು ಉಬೇರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ” ಎಂದರು.