ಎಸ್ ಕೋಡಿ ಬಸ್ಸು ನಿಲ್ದಾಣ ಫೋಟೋ ತೆಗೆಯದಂತೆ ರಿಕ್ಷಾ ಚಾಲಕರಿಂದ ಧಮ್ಕಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ ಪಂಚಾಯತಿ ವ್ಯಾಪ್ತಿಯ ಶೀನಪ್ಪಯ್ಯ ಕೋಡಿ (ಎಸ್ ಕೋಡಿ) ಎಂಬಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಬಸ್ ನಿಲ್ದಾಣಕ್ಕೆ ಸ್ಥಳೀಯರೊಬ್ಬರು ಆಕ್ಷೇಪವೆತ್ತಿ ನ್ಯಾಯಾಲಯ ಮುಖಾಂತರ ತಡೆಯಾಜ್ಞೆ ತಂದಿದ್ದಾರೆ.

ಕೆಲ ದಿನದ ಹಿಂದೆ ಕಿನ್ನಿಗೋಳಿ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಎಂಬಲ್ಲಿ ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಹೋಗುವ ದಿಕ್ಕಿನಲ್ಲಿ ಪಂಚಾಯತಿ ವತಿಯಿಂದ ಬಸ್ ನಿಲ್ದಾಣದ ಕಾಮಗಾರಿ ಬಿರುಸಿನಿಂದ ನಡೆಯುತ್ತಿತ್ತು. ಆದರೆ ಬಸ್ ನಿಲ್ದಾಣದ ಬಳಿ ಇಂಟರಲಾಕ್ ಅಳವಡಿಸಿ ರಿಕ್ಷಾ ಪಾರ್ಕ್ ಮಾಡುತ್ತಿದ್ದಂತೆ ಸ್ಥಳೀಯ ಮನೆಯವರು ತಮ್ಮ ಮನೆಗೆ ಬರುವ ದಾರಿಗೆ ತೊಂದರೆಯಾಗಿದೆ ಎಂದು ತಕರಾರು ಎತ್ತಿ ಬಸ್ ನಿಲ್ದಾಣಕ್ಕೆ ನ್ಯಾಯಾಲಯ ಮುಖಾಂತರ ತಡೆಯಾಜ್ಞೆ ತಂದಿದ್ದಲ್ಲದೆ ನಿಲ್ದಾಣದ ಬದಿ ತಮ್ಮ ಮನೆಗೆ ಹೋಗುವ ರಸ್ತೆಯಲ್ಲಿ ಭಾರೀ ಗಾತ್ರದ ಕಲ್ಲು ಇರಿಸಿದ್ದಾರೆ. ಇದರಿಂದ ಬಸ್ ನಿಲ್ದಾಣ ಕಾಮಗಾರಿ ಅತಂತ್ರ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ.

ಎಸ್ ಕೋಡಿ ಬಸ್ ನಿಲ್ದಾಣದ ಅತಂತ್ರದ ಬಗ್ಗೆ ವರದಿ ಮಾಡಲು ತೆರಳಿದ್ದ ಪರ್ತಕರ್ತರೊಬ್ಬರಿಗೆ ಸ್ಥಳೀಯ ರಿಕ್ಷಾ ಚಾಲಕರು ದಿಗ್ಬಂದನ ವಿದಿಸಿದರು. ಸ್ಥಳೀಯ ರಿಕ್ಷಾ ಚಾಲಕರು ಬಸ್ ನಿಲ್ದಾಣದ ಭಾವಚಿತ್ರ ತೆಗೆದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೊಬೈಲ್ ಹಾಗೂ ಬೈಕಿನ ಬೀಗ ಕಸಿದು ತಗಾದೆ ಮಾಡಿದ್ದಾರೆ ಹಾಗೂ ನಿಲ್ದಾಣದ ಬಗ್ಗೆ ವರದಿ ಮಾಡಿದರೆ ಜಾಗೃತೆ ಎಂದು ಧಮಕಿ ಹಾಕಿದ್ದಾರೆ.

ಎಸ್ ಕೋಡಿಯಲ್ಲಿ ಈಗಾಗಲೇ ಒಂದು ಬಸ್ ನಿಲ್ದಾಣವಿದ್ದು ಇನ್ನೊಂದು ನಿಲ್ದಾಣದ ಅಗತ್ಯವಿತ್ತೇ ಎಂದು ಸ್ಥಳೀಯರು ತಿಳಿಸಿದ್ದು, ಈ ಬಗ್ಗೆ ನಿಲ್ದಾಣಕ್ಕೆ ಖರ್ಚಾದ ಲೆಕ್ಕಪತ್ರದ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಲಿದ್ದಾರೆ.